ಯಜಮಾನಿ ನಾಪತ್ತೆ ರಹಸ್ಯ ಭೇದಿಸಿದ ಬುದ್ಧಿವಂತ ನಾಯಿ

ಸೋಮವಾರ, 8 ಫೆಬ್ರವರಿ 2016 (10:19 IST)
ಹದಿಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧ ಮಹಿಳೆಯ ಸಾವಿನ ರಹಸ್ಯವನ್ನು ಅವರ ಮನೆಯ ಸಾಕು ನಾಯಿಯೇ ಭೇಧಿಸಿದ ಅಚ್ಚರಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನಲ್ಲಿ ನಡೆದಿದೆ. 

ತನಗೆ ಅನ್ನ ಹಾಕಿದ್ದ ಮನೆಯೊಡತಿಯ ತಲೆಬುರುಡೆಯನ್ನು ಮನೆ ಬಾಗಿಲಿಗೆ ತಂದಿತ್ತ ನಾಯಿ ಆಕೆಯ ಪತ್ತೆಗೆ ನೆರವಾಗಿದೆ. 
 
ತಾಲೂಕಿನ ಹುಲಿಹೊಂಡದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು ಸಗ್ಗುಬಾಯಿ ಜನು ಕೊಕರೆ (60) ಎಂದು ಗುರುತಿಸಲಾಗಿದೆ. ಕಳೆದ ತಿಂಗಳ ಜನೇವರಿ 24 ರಂದು ಸಗ್ಗುಬಾಯಿ ಮರಗಡಿ ಗೌಳಿದಡ್ಡಿಯಲ್ಲಿರುವ ಪುತ್ರಿ ಠಕ್ಕು ಭಾಯಿ ಅವರ ಮನೆಗೆ ಹೋಗುತ್ತೇನೆಂದು ಹೋಗಿದ್ದರು. ಆದರೆ ಅಲ್ಲಿಗೂ ತಲುಪದ ಅವರು ನಾಪತ್ತೆಯಾಗಿ ಹೋಗಿದ್ದರು. ಘಟನೆ ನಡೆದು 10 ದಿನಗಳಾಗುತ್ತ ಬಂದರೂ ಅವರು ಪತ್ತೆಯಾಗದಿದ್ದಾಗ ಫೆಬ್ರವರಿ 3 ರಂದು ಅವರ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರಿಗೂ ಯಾವ ಮಾಹಿತಿ ಸಿಕ್ಕಿರಲಿಲ್ಲ. 
 
ಶನಿವಾರ ಅವರ ಮನೆ ನಾಯಿ ತಲೆ ಬುರುಡೆಯೊಂದನ್ನು ತಂದು ಮನೆ ಬಾಗಿಲಿಗೆ ಇಟ್ಟಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸಗ್ಗುಬಾಯಿ ಕುಟುಂಬಸ್ಥರು ಅದು ಆಕೆಯದೇ ತಲೆ ಬುರುಡೆ ಎಂದು ಶಂಕಿಸಿ ಪೊಲೀಸರ ಜತೆ ಸೇರಿ ಹುಡುಕಾಟ ನಡೆಸಿದ್ದರು. ಶನಿವಾರ ಸಂಜೆ ಹುಲಿಹೊಂಡದ ಅರಣ್ಯದಲ್ಲಿ ಮಹಿಳೆಯ ಹರಿದ ಸೀರೆ, ಮಂಗಳಸೂತ್ರ, ಬಳೆಗಳು, ತುಂಡು ತುಂಡಾಗಿರುವ ಎಲುಬುಗಳ ಪತ್ತೆಯಾದವು. 
 
ಯಾವುದೋ ಕಾಡುಪ್ರಾಣಿ ದಾಳಿ ನಡೆಸಿ ಕೊಂದು ತಿಂದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ