ಎಂ.ಎಂ.ಕಲಬುರ್ಗಿ ಹತ್ಯೆಗೆ ಹಿಂದು ಸಂಘಟನೆಗಳು ಹೊಣೆಯಲ್ಲ: ಬಿಜೆಪಿ

ಮಂಗಳವಾರ, 1 ಸೆಪ್ಟಂಬರ್ 2015 (14:48 IST)
ಹಿರಿಯ ಸಾಹಿತಿ , ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಕೇವಲ ಟ್ವಿಟ್ಟರ್ ಸಂದೇಶಗಳಿಂದಾಗಿ ಹಿಂದು ಬಲಪಂಥೀಯ ಸಂಘಟನೆಗಳನ್ನು ಹೊಣೆಯಾಗಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
 
ಕಲಬುರ್ಗಿಯವರ ಹತ್ಯೆ ಕುರಿತಂತೆ ಇದೀಗ ತನಿಖೆ ಆರಂಭವಾಗಿದೆ. ತನಿಖೆ ಆರಂಭವಾಗುವ ಮುನ್ನವೇ ಬಜರಂಗದಳದ ಕಾರ್ಯಕರ್ತನೊಬ್ಬ ದ್ವೇಷ ಸಾರುವ ಸಂದೇಶವನ್ನು ಟ್ವೀಟ್ ಮಾಡಿದ್ದಾನೆ ಎನ್ನುವ ಕಾರಣದಿಂದಾಗಿ ಹಿಂದು ಬಲಪಂಥೀಯ ಗುಂಪುಗಳ ಮೇಲೆ ಆರೋಪ ಹೊರಿಸುವುದು ಸೂಕ್ತವಲ್ಲ ಎಂದು ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. 
 
ಕಲಬುರ್ಗಿಯವರ ಹತ್ಯೆ ಆಘಾತ ಉಂಟು ಮಾಡಿದ್ದು, ಇದೊಂದು ದುರದೃಷ್ಟಕರ ಸಂಗತಿ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. 
 
ರಾಜ್ಯದಲ್ಲಿ ಸಾಹಿತಿಗಳ ಮೇಲೆ ದಾಳಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಸರಕಾರ ಕೂಡಲೇ ಸಾಹಿತಿಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
 
ಹಿರಿಯ ಸಾಹಿತಿ ಕಲಬುರ್ಗಿಯವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತಂತೆ ರಾಜ್ಯ ಸರಕಾರ ತೆಗೆದುಕೊಂಡ ನಿಲುವು ಸ್ವಾಗತಾರ್ಹ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ