ನೆಪ ಹೇಳದೆ ಚುನಾವಣೆ ಪೂರೈಸಿ: ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಸೋಮವಾರ, 30 ಮಾರ್ಚ್ 2015 (15:27 IST)
ಬಿಬಿಎಂಪಿಯ ವಿಭಜನಾ ನೆಪ ಹೇಳಿಕೊಂಡು ಸರ್ಕಾರ ಚುನಾವಣೆಯನ್ನು ಮುಂದೂಡದೆ ಮೇ 30 ರೊಳಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ಇಂದು ಸರ್ರಕ್ಕೆ ಆದೇಶಿಸಿದೆ. 
 
ಸರ್ಕಾರದ ವಿಭಜನಾ ನಿರ್ಣಯದ ವಿರುದ್ಧ ಬಿಬಿಎಂ ಪಿಕಾರ್ಪೊರೇಟರ್ ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠ ಈ ಆದೇಶವನ್ನು ನೀಡಿದ್ದು, ಸರ್ಕಾರ ವಾರ್ಡ್ ಗಳ ಅಥವಾ ಬಿಬಿಎಂಪಿಯ ವಿಭಜನೆಯ ನೆಪವನ್ನು ಹೇಳಬಾರದು. ಬಿಬಿಎಂಪಿ ಚುನಾವಣೆ ಬಗ್ಗೆ ಸರ್ಕಾರ ನೀಡಿರುವ ಹೇಳಿಕೆ ಸಮರ್ಥವಾದುದಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ನೆಪ ಹೇಳದೆ ಮೇ 30 ಒಳಗೆ ಚುನಾವಣೆಯನ್ನು ಮುಗಿಸಬೇಕು ಎಂದು ಆದೇಶಿಸಿದೆ. 
 
ಇದೇ ವೇಳೆ, ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಏಪ್ರಿಲ್ 12ರ ಒಳಗೆ ಮೀಸಲಾತಿ ಪಟ್ಟಿಯನ್ನು ಪರಿಷ್ಕೃತಗೊಳಿಸಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಹಿಂದಿನ ನಿಯಮವನ್ನೇ ಅನುಸರಿಸಿ ಚುನಾವಣೆ ನಡೆಸುವಂತೆ ಆದೇಶಸಿಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.  
 
ಆಡಳಿತ ವ್ಯವಸ್ಥೆಯನ್ನು ನಗರದಲ್ಲಿ ಸುಗಮ ರೀತಿಯಲ್ಲಿ ಜಾರಿಗೊಳಿಸುವ ಅಗತ್ಯವಿದ್ದು, ಬಿಬಿಎಂಪಿಯು ಇಡೀ ಬೆಂಗಳೂರು ಮಹಾನಗರಕ್ಕೆ ಕೇವಲ ಒಂದೇ ಕೇಂದ್ರ ಕಚೇರಿಯಂತಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ವಿಭಜಿಸುವ ಹಾಗೂ ವಾರ್ಡ್‌ಗಳ ಪುನರ್ ವಿಂಗಡನೆಯ ಅಗತ್ಯವಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿತ್ತು. ಅಲ್ಲದೆ ಈ ಸಲುವಾಗಿಯೇ ಬಿಬಎಂಪಿ ಚುನಾವಣೆಯನ್ನು ತಡವಾಗಿ ನಡೆಸಲು ತೀರ್ಮಾನಿಸಲಾಗುತ್ತದೆ ಎಂಬ ಅನುಮಾನಗಳು ಮೂಡಿ ಬಂದಿದ್ದವು. ಆದ್ದರಿಂದ ಕಾರ್ಪೊರೇಟರ್ ರಾಮಮೂರ್ತಿ ಅವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಪೀಠ ಈ ಆದೇಶವನ್ನು ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ