ದಯಮಾಡಿ ಆತ್ಮಹತ್ಯೆಗೆ ಯತ್ನಿಸಬೇಡಿ: ರೈತರಿಗೆ ಸಿಎಂ ಮನವಿ

ಶನಿವಾರ, 4 ಜುಲೈ 2015 (16:11 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಪ್ರತಿಕ್ರಿಯಿಸಿದ್ದು, ರೈತರ ಸಮಸ್ಯೆಗಳ ಪರಿಹಾರಕ್ಕೆಂದೇ ರಾಜ್ಯ ಸರ್ಕಾರವಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಮನವಿ ಮಾಡಿದ್ದಾರೆ. 
 
ಕಾರ್ಯ ನಿಮಿತ್ತ ಜಿಲ್ಲೆಯ ಸಂಡೂರಿಗೆ ಆಗಮಿಸಿದ್ದ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಜ್ಯದಲ್ಲಿ ಜೂನ್ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಒಟ್ಟು 25 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಲ್ಲಿ 8 ಮಂದಿ ಕಬ್ಬು ಬೆಳೆಗಾರರು ಸಾವನ್ನಪ್ಪಿದ್ದಾರೆ. ಆದರೆ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ರೈತರು ದಯಮಾಡಿ ಅಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಮನವಿ ಮಾಡಿದರು. 
 
ಇದೇ ವೇಳೆ, ರೈತರು ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಪಡೆದು ಸರ್ಕಾರದ ಫಲನಾಭುವಿಗಳಾಗಬೇಕು. ಏಕೆಂದರೆ ಸರ್ಕಾರ ರೈತರಿಗಾಗಿಯೇ ಸಾಲಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಒದಗಿಸಲಾಗುತ್ತಿದೆ. ರೈತರು ಸರ್ಕಾರದ ಪ್ರಯೋಜನವನ್ನು ಪಡೆಯಬೇಕು. ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸದಾ ಸಿದ್ಧವಿದೆ ಎಂದರು. 
 
ಬಳಿಕ, ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಖಾಸಗಿಯಾಗಿ ಸಾಲ ನೀಡಿ ಹಣ ನೀಡುವಂತೆ ಕಿರುಕುಳ ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ ಎಂದ ಅವರು, ರಾಜ್ಯದಲ್ಲಿ ಪ್ರಸ್ತುತ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ 7.5 ಲಕ್ಷ ಲೀಟರ್ ಹಾಲನ್ನು ವಿತರಿಸಲಾಗುತ್ತಿದ್ದು, ಮೂರು ದಿನಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಅದನ್ನು ಐದು ದಿನಗಳಿಗೆ ವಿಸ್ತರಿಸುವ ಚಿಂತನೆ ನಡೆಯುತ್ತಿದ್ದು, ಒಂದು ವೇಳೆ ಒಪ್ಪಿಗೆ ದೊರೆತಲ್ಲಿ ಸರ್ಕಾರ ಐದು ದಿನಗಳಿಗೆ ಒಟ್ಟು 12 ಲಕ್ಷ ಲೀಟರ್ ಹಾಲನ್ನು ಮಕ್ಕಳಿಗೆ ಒದಗಿಸಲಿದೆ ಎಂದರು. 
 
ಕಬ್ಬಿನ ಬಾಕಿ ಹಣ ಪಾವತಿಸಿಲ್ಲ ಎಂಬ ಕಾರಣದಿಂದ ಹಾಗೂ ಸಾಲಬಾಧೆ ತಾಳಲಾರದೆ ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ 25 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ