ರಜನಿ, ಲಿಂಗಾ ಚಿತ್ರದ ವಿರುದ್ಧ ಅವಹೇಳನಕಾರಿ ಹೇಳಿಕೆ ಬೇಡ: ವಿತರಕರಿಗೆ ಕೋರ್ಟ್ ಸೂಚನೆ

ಬುಧವಾರ, 25 ಫೆಬ್ರವರಿ 2015 (18:22 IST)
ರಜಿನಿಕಾಂತ್ ಹಾಗೂ ಲಿಂಗಾ ಚಿತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ತಮಿಳುನಾಡಿನ 9 ಮಂದಿ ಚಿತ್ರ ವಿತರಕರಿಗೆ ನಗರದ 15ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಇಂದು ನಿರ್ಬಂಧ ಹೇರಿದೆ. 
 
ಪ್ರಕರಣದ ಹಿನ್ನೆಲೆ: ಖ್ಯಾತ ನಟ ರಜನಿಕಾಂತ್ ನಟಿಸಿದ್ದ ಲಿಂಗಾ ಚಿತ್ರದ ವಿತರಣೆಯ ಹಕ್ಕುಗಳನ್ನು ಚಿತ್ರದ ವಿತರಕರು  ಕೋಟಿಗಟ್ಟಲೆ ಹಣ ನೀಡಿ ಖರೀದಿಸಿದ್ದರು. ಆದರೆ ಸಿನಿಮಾದ ಪ್ರದರ್ಶನವು ಯಶಸ್ಸು ಕಾಣದ ಹಿನ್ನೆಲೆಯಲ್ಲಿ ವಿತರಕರು ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಸಿನಿಮಾಗಳನ್ನು ನಂಬಿಕೊಂಡರೆ ಅಷ್ಟೇ, ಮೂರು ಪಂಗನಾಮವೇ ಗತಿ ಎಂಬಂತಹ ವಿಚಿತ್ರ ಹೇಳಿಕೆಗಳನ್ನು ಮಾಧ್ಯಮಗಳೆದುರು ನೀಡುತ್ತಿದ್ದರು ಎನ್ನಲಾಗಿದ್ದು, ನಟ ರಜನಿಕಾಂತ್ ಹಾಗೂ ಲಿಂಗಾ ಚಿತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಕ್ ಲೈನ್ ಎಂಟರ್‌ಟೈನ್‌ಮೆಂಟ್ ವಿತರಕರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. 
 
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಇಂದು ರಜಿನಿಕಾಂತ್ ಹಾಗೂ ಲಿಂಗಾ ಚಿತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ತಮಿಳುನಾಡಿನ 9 ಮಂದಿ ವಿತರಕರಿಗೆ ನಿರ್ಬಂಧ ಹೇರಿದೆ.  

ವೆಬ್ದುನಿಯಾವನ್ನು ಓದಿ