ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಅನುಮಾನದ ಹೊಗೆ

ಶನಿವಾರ, 24 ಜನವರಿ 2015 (14:07 IST)
ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಪ್ರಸ್ತುತ ಹೊಗೆಯಾಡುತ್ತಿದ್ದು, ಸಂಸ್ಥಾನದ ಕೊನೆ ಅರಸ ಶ್ರೀಕಂಠದತ್ತ ಒಡೆಯರ್ ಅವರ ಸಹೋದರಿಯೋರ್ವರ ಪುತ್ರ, ಚಂದ್ರ ಕಾಂತರಾಜೇ ಅರಸ್ ಅವರು ರಾಣಿ ಪ್ರಮೋದಾ ದೇವಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನನ್ನ ಹಾಗೂ ನನ್ನ ಪತ್ನಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಹೌದು, ಸಂಸ್ಥಾನದ ಕೊನೆಯ ಅರಸರಾಗಿ ಆಡಳಿತದ ಉಸ್ತುವಾರಿ ನೋಡಿಕೊಂಡು ಅನಾರೋಗ್ಯ ನಿಮಿತ್ತ ಇಹಲೋಕ ತ್ಯಜಿಸಿದ್ದ ಶ್ರೀಕಂಠದತ್ತ ಒಡೆಯರ್ ಅವರ ಸೋದರಿ ಪುತ್ರ ಚಂದ್ರ ಕಾಂತರಾಜೇ ಅರಸ್ ಅವರು ಈ ಆರೋಪವನ್ನು ಮಾಡಿದ್ದು, ಮಹಾರಾಣಿ ಪ್ರಮೋದಾ ದೇವಿಯವರು ಒಡೆಯರ್ ಅವರ ಸಹೋದರರ ಪುತ್ರ ಯದುವೀರ ಗೋಪಾಲರಾಜೇ ಅರಸ್ ಅವರನ್ನು ಜ.22ರಂದು ನನ್ನೊಂದಿಗೇ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ರಾಣಿಯವರ ಈ ವರ್ತನೆ ಸಂಸ್ಥಾನದ ಮುಂದಿನ ಉತ್ತರಾಧಿಕಾರಿಯನ್ನಾಗಿ ಯದುವೀರ ಗೋಪಾಲರಾಜೇ ಅರಸ್ ಅವರನ್ನೇ ನೇಮಿಸಲು  ಪ್ರಯತ್ನಿಸುತ್ತಿದ್ದಾರೆ ಎನಿಸುತ್ತದೆ ಎಂದರು. ಬಳಿಕ, ಇವರೆಲ್ಲರೂ ಸೇರಿಕೊಂಡು ನನ್ನ ಹಾಗೂ ನನ್ನ ಪತ್ನಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಮಹಾರಾಣಿ ಪ್ರಮೋದಾದೇವಿಯವರು ತಮ್ಮ ನಿಲುವನ್ನು ಪ್ರಕಟಿಸಲಿ ಎಂದರು. 
 
ಉತ್ತರಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಮಹಾರಾಣಿ ಪ್ರಮೋದಾದೇವಿ, ಸಂಸ್ಥಾನಕ್ಕೆ ಸಂಬಂಧಿಸಿದಂತೆ ಹಲವಾರು ತೊಡಕುಗಳಿದ್ದು, ನ್ಯಾಯಾಲಯದ ತೀರ್ಪು ಬಿದ್ದು ಆ ಎಲ್ಲಾ ಸಮಸ್ಯೆಗಳು ಬಗೆಹರಿದ ಬಳಿಕವಷ್ಟೇ ಉತ್ತರಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಚಿಂತಿಸಲಾಗುವುದು ಎಂದಿದ್ದರು. 

ವೆಬ್ದುನಿಯಾವನ್ನು ಓದಿ