ಹೈದರಾಬಾದ್‌ನಲ್ಲಿ ನಕಲಿ ಬಾಬಾ: ಸಾರ್ವಜನಿಕರಿಂದ ಧರ್ಮದೇಟು

ಸೋಮವಾರ, 3 ಆಗಸ್ಟ್ 2015 (13:44 IST)
ಮಂತ್ರವಾದಿಯಂತೆ ವೇಷ ಧರಿಸಿ ಸಮಸ್ಯೆ ಪರಿಹರಿಸುವ ಡೋಂಗಿ ಪ್ರವಚನ ನೀಡುತ್ತಾ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಡೋಂಗಿ ಸ್ವಾಮೀಜಿಯೋರ್ವನ ಮನೆಗೆ ಮಹಿಳೆಯೋರ್ವರ ಸಂಬಂಧಿಕರು ಹಾಗೂ ಸಾರ್ವಜನಿಕರು, ನುಗ್ಗಿ ಸ್ವಾಮೀಜಿಯನ್ನು ಸಾರ್ವಜನಿಕವಾಗಿ ಮನ ಬಂದಂತೆ ಥಳಿಸಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. 
 
ರಾಜ್ಯದ ರಾಜಧಾನಿ ಹೈದರಾಬಾದ್‌ಗೆ ಅಂಟಿಕೊಂಡಂತಿರುವ ರಂಗಾರೆಡ್ಡಿ ಜಿಲ್ಲೆಯ ತೋರಮಾಮಿಡಿ ಗ್ರಾಮದ ನಿವಾಸಿ ಮುರ್ಚದ್ ಬಾಬಾ ಎಂಬಾತನೇ ಡೋಂಗಿ ಸ್ವಾಮೀಜಿ ಎಂದು ಹೇಳಲಾಗಿದ್ದು, ಈತ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯೋರ್ವರ ಸಂಬಂಧಿಕರು ಹಾಗೂ ಸಾರ್ವಜನಿಕರು ಒಗ್ಗೂಡಿ ಇಂದು ಆತನ ಮನೆಗೇ ನುಗ್ಗಿ ಹೊರ ಎಳೆ ತಂದು ಸಾರ್ವಜನಿಕವಾಗಿ ಮನ ಬಂದಂತೆ ಥಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. 
 
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?:
ಓರ್ವ ಮಹಿಳೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಳು. ಈ ವೇಳೆ ಪರಿಹಾರದ ಸೂತ್ರವಾಗಿ ಮೈಯನ್ನು ನೇವರಿಸುತ್ತಿದ್ದ ಡೋಂಗಿ ಸಾಮೀಜಿ, ದೇಹದ ಇತರೆಡೆಯೂ ಕೂಡ ಕೈಯ್ಯಾಡಿಸುವ ಮೂಲಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಚಾರವನ್ನು ಮಹಿಳೆ ತನ್ನ ಸಂಬಂಧಿಕರಲ್ಲಿ ಹೇಳಿಕೊಂಡಿದ್ದಾಳೆ. ಇದನ್ನರಿತ ಸಂಬಂಧಿಕರು ಹಾಗೂ ಸಾರ್ವಜನಿಕರು ಆತನನ್ನು ಮನಸೋಇಚ್ಛೆಯಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಇನ್ನು ನಕಲಿ ಬಾಬಾನನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ