ಜೆಡಿಎಸ್ ಜತೆ ಮೈತ್ರಿಗೆ ಬಿಜೆಪಿ ಕಸರತ್ತು; ದೇವೇಗೌಡ -ಡಿವಿಎಸ್ ಭೇಟಿ

ಶನಿವಾರ, 29 ಆಗಸ್ಟ್ 2015 (11:31 IST)
ಬಿಬಿಎಂಪಿ ಅಧಿಕಾರಕ್ಕಾಗಿ ಕಾಂಗ್ರೆಸ್- ಬಿಜೆಪಿ ನಡೆಸುತ್ತಿರುವ ಮೈತ್ರಿ ಕಸರತ್ತು ಕುತೂಹಲವನ್ನು ಕೆರಳಿಸಿದ್ದು ನಿನ್ನೆ ಕಾಂಗ್ರೆಸ್  ಜೆಡಿಎಸ್ ಜತೆ ಮೈತ್ರಿ  ಮಾಡಿಕೊಳ್ಳಲು ಯತ್ನಿಸುತ್ತಿರುವ ಸುದ್ದಿ ಕೇಳಿ ಬಂದ ಹಿನ್ನೆಲೆಯಲ್ಲೇ ಈಗ ಬಿಜೆಪಿ ಸಹ ಜೆಡಿಎಸ್ ಜತೆ ಮೈತ್ರಿಗೆ ಯೋಜನೆ ರೂಪಿಸಿದೆ ಎಂಬ ಮಾಹಿತಿ ಹರಿದು ಬಂದಿದೆ. ಇದಕ್ಕೆ ಪೂರಕವಾಗಿ ಇಂದು ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಸದಾನಂದ ಗೌಡ  ಇಂದು ಮುಂಜಾನೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.

ದೇವೇಗೌಡರ ಜತೆ ಮಾತನಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿಎಸ್, "ದೇವೇಗೌಡರ ಜೊತೆ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚಿಸಿದ್ದೇನೆ. ಮೈತ್ರಿ ಬಗ್ಗೆ ಅವರಿನ್ನು ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಸೆಪ್ಟೆಂಬರ್ 2ರಂದು ಮೈತ್ರಿ ಬಗ್ಗೆ ಖಚಿತ ನಿರ್ಧಾರ ಪ್ರಕಟಿಸುವ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
 
ಪಕ್ಷೇತರರನ್ನು ಸಹ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ತನ್ನಿಂದಾದಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.
 
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕೇಂದ್ರ ಸಚಿವ ಸದಾನಂದಗೌಡ ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ  ಹೆಚ್‍ಡಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ರಾಜಕೀಯ ವಲಯದ ಹೊಸ ಸಂಚಲನವನ್ನು ಹುಟ್ಟು ಹಾಕಿದೆ.
 
ಕಾಂಗ್ರೆಸ್ ಸಹ ಜೆಡಿಎಸ್ ಜತೆಗೆ ಕೈ ಜೋಡಿಸುವ ಕುರಿತಂತೆ ಇಂದು ನಿರ್ಧಾರ ಕೈಗೊಳ್ಳಲಿದೆ. 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಎಲ್ಲಾ ಪಾಲಿಕೆ ಸದಸ್ಯರು ಹಾಜರಿರಲಿದ್ದಾರೆ.

ವೆಬ್ದುನಿಯಾವನ್ನು ಓದಿ