ಈಗಲ್‌ಟನ್ ರೆಸಾರ್ಟ್ ಭೂ ಒತ್ತುವರಿ ಪ್ರಕರಣ: 28.32 ಎಕರೆ ತೆರವಿಗೆ ಮುಂದಾದ ಜಿಲ್ಲಾಡಳಿತ

ಸೋಮವಾರ, 5 ಅಕ್ಟೋಬರ್ 2015 (17:32 IST)
ಜಿಲ್ಲೆಯ ಬಿಡದಿ ನಗರದ ಬಳಿ ಇರುವ ಈಗಲ್‌ಟನ್ ಗಾಲ್ಫ್ ರೆಸಾರ್ಟ್ 100 ಎಕರೆ ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಭೂ ತೆರವಿಗೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತದ ಅಧಿಕಾರಿಗಳು ತೆರವಿಗೆ ಮುಂದಾಗಿದ್ದಾರೆ. 
 
ಜಿಲ್ಲೆಯ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಮತ್ತು ತಹಶಿಲ್ದಾರ್ ಮಂಜಪ್ಪ ಅವರ ನೇತೃತ್ವದಲ್ಲಿ ತೆರವು ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಈಗಲ್‌ಟನ್ ಗಾಲ್ಫ್ ರೆಸಾರ್ಟ್ ಬಳಿ ಜಮಾಯಿಸಿದ್ದಾರೆ. ಅಲ್ಲದೆ ಕೋರ್ಟ್ ಆದೇಶದಂತೆ 28.32 ಎಕರೆ ಭೂಮಿಯನ್ನು ತೆರವುಗೊಳಿಸಲು ಮುಂದಾಗಿದ್ದು, ಸಮೀಕ್ಷೆ ನಡೆಸುತ್ತಿದ್ದಾರೆ. 
 
ಇನ್ನು ಈ ಪ್ರಕರಣ ಸಂಬಂಧ ಆದೇಶ ನೀಡಿದ್ದ ಕೋರ್ಟ್, 100 ಎಕರೆಯ ಪೈಕಿ 28.32 ಎಕರೆಯ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಿರಿ. ಇನ್ನುಳಿದ 77.19 ಎಕರೆ ಭೂಮಿಗೆ ಮಾರುಕಟ್ಟೆ ದರ ನಿಗದಿಗೊಳಿಸಿ ಅದರಂತೆ ಹಣವನ್ನು ವಸೂಲಿ ಮಾಡಿ ಎಂದು ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಈ ಹಿಂದೆ ಇದ್ದ ಜಿಲ್ಲೆಯ ಜಿಲ್ಲಾಧಿಕಾರಿಗಳು 77.19 ಎಕರೆ ಭೂಮಿಗೆ ಮಾರುಕಟ್ಟೆ ದರದಂತೆ 980 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಿ ಸರ್ಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರಿಗೆ ವರದಿಯನ್ನೂ ಸಲ್ಲಿಸಿದ್ದರು.
 
ಈ ಈಗಲ್‌ಟನ್ ರೆಸಾರ್ಟ್‌ನ್ನು ಕಳೆದ 1995ರಲ್ಲಿ ಸ್ಥಾಪಿಸಲಾಗಿದ್ದು, 509 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. 

ವೆಬ್ದುನಿಯಾವನ್ನು ಓದಿ