ನೇಪಾಳ ರಾಜಧಾನಿಯಲ್ಲಿ ಭಾರೀ ಭೂಕಂಪ: ಸಾವಿರಕ್ಕೂ ಹೆಚ್ಚು ಮಂದಿ ಸಾವಿನ ಶಂಕೆ

ಶನಿವಾರ, 25 ಏಪ್ರಿಲ್ 2015 (12:32 IST)
ನೆರೆ ರಾಷ್ಟ್ರವಾಗಿರುವ ನೇಪಾಳದ ರಾಜಧಾನಿ ಕಠ್ಮಂಡು ನಗರದಲ್ಲಿ ಇಂದು ಭಾರೀ ಪ್ರಮಾಣದ ಭೂ ಕಂಪನ ಸಂಭವಿಸಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. 
 
ಮಾಹಿತಿಗಳ ಪ್ರಕಾರ, ನೇಪಾಳದ ಲುಂಜಂಗ್ ಎಂಬ ಪ್ರದೇಶ ಭೂ ಕಂಪನದ ಕೇಂದ್ರ ಬಿಂದುವಾಗಿದ್ದು, ಇಂದು ಮಧ್ಯಾಹ್ನ 11.26ರಿಂದ 11.29ರ ವರೆಗೆ ಸುಮಾರು ಮೂರು ನಿಮಿಷಗಳ ಕಾಲ ಅಗಾಧವಾಗಿ ಭೂಮಿ ನಡುಗಿದ್ದು, ಈ ವೇಳೆ ಸಾಕಷ್ಟು ಹಾನಿ ಸಂಭವಿಸಿದೆ. ಅಲ್ಲದೆ ನಗರದಲ್ಲಿ ಸಂಭವಿಸಿದ ಭೂ ಕಂಪನದ ಪ್ರಮಾಣ ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, 7.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. 
 
ಘಟನೆಯಿಂದ ನಗರದಲ್ಲಿನ ಹಲವು ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳು ನೆಲಕ್ಕುರುಳಿರುವ ಹಿನ್ನೆಲೆಯಲ್ಲಿ ಒಳಗಿದ್ದ ಸಾಕಷ್ಟು ಮಂದಿ ಸಾರ್ವಜನಿಕರು ಗಾಯಗೊಂಡಿದ್ದಾರೆ. ಅಲ್ಲದೆ ಕಟ್ಟಡಗಳ ಅವಶೇಷಗಳಡಿ ಸಾಕಷ್ಟು ಮಂದಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ಸಾರ್ವಜನಿಕರು ರಕ್ಷಣೆಗಾಗಿ ಗೋಗರೆಯುತ್ತಿದ್ದಾರೆ. ಇದರಿಂದ ಇಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. 

ಇನ್ನು ಬೃಹತ್ ಗಾತ್ರದ ಕಟ್ಟಡಗಳು ನೆಲಕ್ಕುರುಳಿರುವ ಪರಿಣಾಮ ನಗರದಲ್ಲಿ ದಟ್ಟವಾಗಿ ಧೂಳು ಹರಡಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಇಲ್ಲಿನ ಸರ್ಕಾರ ಸಾರ್ವಜನಿಕರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿದೆ. 
 
ಘಟನೆ ಹಿನ್ನೆಲೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣದ ರನ್ ವೇ ಭಾರೀ ಪ್ರಮಾಣದ ಹಾನಿಗೀಡಾಗಿರುವ ಪರಿಣಾಮ ಇಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಭಾರತದ ವಿಮಾನ ನಿಲ್ದಾಣಗಳಲ್ಲಿ ಇಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ  ಇಲ್ಲಿ ಇಲ್ಲಿಯವರೆಗೂ ಕೂಡ 10 ಭಾರಿ ಭೂಕಂಪನ ಸಂಭವಿಸಿದೆ ಎನ್ನಲಾಗಿದೆ. ಎಂದು ಮೂಲಗಳು ತಿಳಿಸಿವೆ. 

ಘಟನೆಯಲ್ಲಿ ಇಲ್ಲಿನ ಐತಿಹಾಸಿಕ ಕಟ್ಟಡವೊಂದು ನೆಲಕ್ಕುರುಳಿದ್ದು, ಇದರ ಒಳಭಾಗದಲ್ಲಿದ್ದ 15 ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದ್ದು, ಇದು ದುರಂತದಲ್ಲಿ ಕಂಡು ಬಂದ ಮೊದಲ ಬಲಿ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ