ನೇಪಾಳದಲ್ಲಿ ಭೂಕಂಪ: ಕರ್ನಾಟಕದ 175 ಮಂದಿ ಪ್ರವಾಸಿಗರು ನಾಪತ್ತೆ

ಶನಿವಾರ, 25 ಏಪ್ರಿಲ್ 2015 (17:00 IST)
ನೇಪಾಳದಲ್ಲಿ ಇಂದು ಬೆಳಗ್ಗೆ ಭಾರೀ ಪ್ರಮಾಣದ ಭೂ ಕಂಪನ ಸಂಭವಿಸಿದ್ದು, ಕರ್ನಾಟಕದ ಪ್ರವಾಸಿಗರು ಕೂಡ ನಗರದಲ್ಲಿ ಸಿಲುಕಿದ್ದು, ಭೂಕಂಪನ ಪರಿಣಾಮ ಪರಿತಪಿಸುತ್ತಿದ್ದಾರೆ.  
 
ಮೂಲಗಳ ಪ್ರಕಾರ, ದಾವಣಗೆರೆ ನಗರದ 7 ಮಂದಿ ನಿವಾಸಿಗಳು ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದ್ದು, ಭೂಕಂಪನದ ಪರಿಣಾಮ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿ ದೇವಾಲಯದ ಆವರಣದಲ್ಲಿ ಸಿಲುಕಿದ್ದಾರೆ. ಸಿಲುಕಿರುವವರಲ್ಲಿ ಪರಿಮಳ, ರಾಘವೇಂದ್ರ, ಸೌಮ್ಯ ಸುಶೀಲಾ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಇವರು ನೇಪಾಳದ ಮುಕ್ತಿನಾಗದಿಂದ ಪೋಖ್ರಾಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಭೂಕಂಪನ ಸಂಭವಿಸಿದ್ದು, ಪೇಚಿಗೆ ಸಿಲುಕಿದ್ದಾರೆ. ಇನ್ನು ಇವರೊಂದಿಗೆ ರಾಜ್ಯದ 50 ಮಂದಿ ಇದ್ದ ಮತ್ತೊಂದು ತಂಡ ಕೂಡ ಇದ್ದು, ಈ ಎಲ್ಲರೂ ಕಠ್ಮಂಡುವಿನ ಪಶುಪತಿ ದೇವಾಲಯದ ಆವರಣದಲ್ಲಿದ್ದಾರೆ ಎಂಬುದಾಗಿ ಸಿಲುಕಿದ್ದಾರೆ.   
 
ಇಲ್ಲಿ ರಾಜ್ಯದ ಬೆಳಗಾವಿ ನಗರದ 35 ಮಂದಿ ಇರುವ ತಂಡವೂ ಕೂಡ ನೇಪಾಳದಲ್ಲಿದ್ದು, ಎಲ್ಲರೂ ಕೂಡ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. 
 
ಇನ್ನು ಕರ್ನಾಟಕದಿಂದ ತೆರಳಿದ್ದ ಒಟ್ಟು 175 ಮಂದಿ ಇದ್ದ ಮತ್ತೊಂದು ತಂಡ ದೂರವಾಣಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. 
 
ಬೆಂಗಳೂರು ಮೂಲದ ನಾಲ್ವರು ಮಂದಿ, ಕನಕಪುರ ರಸ್ತೆಯ ಅಜ್ಜನಪುರ ನಿವಾಸಿಗಳಾದ ರಮಾ, ಉಮಾ, ಬಾಲಕೃಷ್ಣ ಹಾಗೂ ಕುಮಾರಸ್ವಾಮಿ ಅವರೂ ಕೂಡ ನೇಪಾಳ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದ್ದು, ಇವರ ಸಂಪರ್ಕವೂ ಕೂಡ ಕಡಿತವಾಗಿದೆ. ಈ ನಾಲ್ವರೂ ಕೂಡ ಹಿರಿಯ ನಾಗರಿಕರಾಗಿದ್ದಾರೆ ಎನ್ನಲಾಗಿದೆ. 
 
ಬೆಂಗಳೂರಿನಿಂದ ತೆರಳಿದ್ದ 85 ಮಂದಿ ಇದ್ದ ತಂಡವೊಂದು ಸುರಕ್ಷಿತವಾಗಿದೆ ಎಂಬ ಸುದ್ದಿ ತಿಳಿದಿದೆ. 

ವೆಬ್ದುನಿಯಾವನ್ನು ಓದಿ