ನೇಪಾಳದಲ್ಲಿ ಭೂಕಂಪ: ರಕ್ಷಣಾ ಕಾರ್ಯಕ್ಕೆ ಭಾರತದ ಸಹಾಯಹಸ್ತ

ಶನಿವಾರ, 25 ಏಪ್ರಿಲ್ 2015 (17:25 IST)
ನೆರೆ ರಾಜ್ಯ ನೇಪಾಳದಲ್ಲಿ ಭಾರೀ ಪ್ರಮಾಣದ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ತುರ್ತು ಸಭೆ ನಡೆಸಿದ್ದು, ಮಾನವೀಯತೆಯ ಹಿತ ದೃಷ್ಟಿಯಿಂದ ನೇಪಾಳ ಹಾಗೂ ಸ್ವದೇಶಿ ನಾಗರೀಕರ ರಕ್ಷಣಾ ಕಾರ್ಯಾಚರಣೆಗೆ ಕ್ರಮ ಕೈಗೊಂಡಿದ್ದು, ರಕ್ಷಣೆಗೆ ಸೂಚಿಸಿದ್ದಾರೆ. 
 
ಮೂಲಗಳ ಪ್ರಕಾರ, ಮೋದಿ ಅವರು ನೇಪಾಳ ಪ್ರಧಾನಿ ಸುಶೀಲ್ ಕುಮಾರ್ ಕೋಯಿರಾಲಾ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಎಲ್ಲಾ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. 
 
ಹಲವು ತುರ್ತು ತೀರ್ಮಾನಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 40 ಮಂದಿ ತಜ್ಞರು, ಎನ್‌ಡಿಆರ್‌ಪಿಎಫ್‌ನ  10 ರಕ್ಷಣಾ ತಂಡಗಳು ಹಾಗೂ 4 ಟನ್ ಔಷಧಿಯನ್ನು ರವಾನಿಸಲಾಗಿದೆ. ಈ ಎಲ್ಲವನ್ನೂ ಕೂಡ ಎರಡು ವಿಶೇಷ ವಿಮಾನದಲ್ಲಿ ಸಾಗಿಸಲಾಗುತ್ತಿದೆ. 
 
ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರೆ ಸಂಪುಟ ಸಹೋದ್ಯೋಗಿಗಳು ಭಾಗವಹಿಸಿದ್ದರು. ಅಲ್ಲದೆ ಭೂಕಂಪನದ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿಯೂ ಕೂಡ ಕಂಪನ ಅನುಭವ ಉಂಟಾಗಿದ್ದು, ಇಲ್ಲಿಯವರೆಗೆ 31 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತಿಳಿದ ಪ್ರಧಾನಿ, ಮುಂದಿನ ಕ್ರಮ ಹಾಗೂ ಪರಿಹಾರದ ಬಗ್ಗೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ