ನೇಪಾಳದಲ್ಲಿ ಭೂಕಂಪ: ಸಂತ್ರಸ್ತರ ಸಹಾಯಕ್ಕೆ ಮುಂದಾದ ಮಂತ್ರಾಲಯ

ಶನಿವಾರ, 2 ಮೇ 2015 (12:40 IST)
ನೇಪಾಳದಲ್ಲಿ ಭೂಕಂಪ ಸಂಭವಿಸಿರುವ ಪರಿಣಾಮ ರಾಜ್ಯದ ಪ್ರಖ್ಯಾತ ಮಠಗಳಲ್ಲೊಂದಾದ ಮಂತ್ರಾಲಯ ಪೀಠವು ಅಲ್ಲಿನ ಸಂತ್ರಸ್ತರಿಗೆ ಸಹಾಯಸ್ತ ಚಾಚಲು ಮುಂದಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.  
 
ಹೌದು, ಭೂಕಂಪ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಿಂದ ಪರಿಹಾರದ ಹೊಳೆಯೇ ಹರಿದು ಬರುತ್ತಿದ್ದು, ಇದರಲ್ಲಿ ಶ್ರೀಮಠವೂ ಕೂಡ ಕೈ ಜೋಡಿಸಿದೆ. 
 
ಮೂಲಗಳ ಪ್ರಕಾರ, ಮಠದಿಂದ ಈಗಾಗಲೇ 15ರಿಂದ 20ಲಕ್ಷ ರೂ. ಮೌಲ್ಯದ ಔಷಧವನ್ನು ಈಗಾಗಲೇ ಸಾಗಿಸಲಾಗಿದ್ದು, ಇನ್ನೂ ಕೂಡ ಸಾಧ್ಯವಾಗುವಷ್ಟು ಸಹಾಯ ಮಾಡಲು ಮಠ ಸಿದ್ಧವಾಗಿದ್ದು, ಸಂತ್ರಸ್ತರಿಗೆ ಔಷಧಿ, ಬಟ್ಟೆ ಬರೆಗಳನ್ನು ಒದಗಿಸಲಾಗುತ್ತಿದೆ. 
 
ಈ ಬಗ್ಗೆ ಶ್ರೀಮಠದ ಪೀಠಾಧಿಪತಿ ಸುಭುದೇಂದ್ರ ಶ್ರೀಗಳು ಮಾತನಾಡಿದ್ದು, ನಾವು ಈ ಸೇವೆಯನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಬದಲಾಗಿ ಮಾನವೀಯತೆಯ ದೃಷ್ಟಿಯಿಂದ ಸಹಾಯಸ್ತ ಚಾಚಿದ್ದೇವೆ.  ಮಠದ ವತಿಯಿಂದ ನೇಪಾಳದ ಭೂಕಂಪ ಸಂತ್ರಸ್ತರಿಗೆ ರವಾನಿಸಲು ಪುರುಷರಿಗಾಗಿ ಪಂಚೆ, ಅಂಗಿ ಹಾಗೂ ಮಹಿಳೆಯರಿಗೆ ಸೀರೆ ಮತ್ತು ಇತರೆ ಉಡುಪುಗಳನ್ನು ಖರೀದಿಸಲಾಗಿದೆ. ಇದರ ಜೊತೆಗೆ ಸಾಕಷ್ಟು ನಗದು ಹಣವನ್ನೂ ಕೂಡ ಸಂಗ್ರಹಿಸಲಾಗಿದೆ ಎಂದರು.
 
ಇದೇ ವೇಳೆ, ಈ ಎಲ್ಲಾ ಸಾಮಗ್ರಿ ಹಾಗೂ ನಿಧಿಯನ್ನು ಮಠದ ಭಕ್ತರ ಮತ್ತು ಶಿಷ್ಯರ ಸಹಾಯದಿಂದ ಸಾಧ್ಯವಾಗಿದ್ದು, ಬೆಂಗಳೂರಿನ ಜಯನಗರ ಸೇರಿದಂತೆ ಇತರೆ ನಗರಗಳ ಬೀದಿ ಬೀದಿ ಸಂಚರಿಸಿ ಪಾದಯಾತ್ರೆ ಮೂಲಕ ನಿಧಿ ಸಂಗ್ರಹ ಮಾಡಲಾಗಿದೆ. ಈ ಎಲ್ಲವನ್ನೂ ಕೂಡ ವ್ಯವಸ್ಥಿತವಾಗಿ ಪ್ರಧಾನಿ ಕಚೇರಿಯ ಮೂಲಕ ತಲುಪಿಸುತ್ತೇವೆ ಎಂದರು. 

ನೇಪಾಳದಲ್ಲಿ ಏಪ್ರಿಲ್ 25ರಿಂದು ಮೂರು ದಿನಗಳ ಕಾಲ ಭೂಕಂಪ ಸಂಭವಿಸಿದ್ದ ಹಿನ್ನೆಲೆಯಲ್ಲಿ 4000ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 9 ಸಾವಿರ ಮಂದಿ ಗಾಯಗೊಂಡಿದ್ದರು. ಅಲ್ಲದೆ 62 ಸಾವಿರ ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.9ರಷ್ಟು ತೀವ್ರತೆ ದಾಖಲಾಗಿತ್ತಲ್ಲದೆ 70ಕ್ಕೂ ಅಧಿಕವಾಗಿ ಭೂಮಿ ನಡುಗಿತ್ತು. 

ವೆಬ್ದುನಿಯಾವನ್ನು ಓದಿ