ನೇಪಾಳದಲ್ಲಿ ಭೂಕಂಪ: ರಾಜ್ಯದವರ ರಕ್ಷಣೆಗಾಗಿ ಸಿದ್ದು ತುರ್ತುಸಭೆ

ಶನಿವಾರ, 25 ಏಪ್ರಿಲ್ 2015 (16:13 IST)
ನೇಪಾಳದಲ್ಲಿ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಪ್ರವಾಸಕ್ಕೆಂದು ತೆರಳಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಹೇಗೆ ರಕ್ಷಿಸುವುದು ಎಂಬ ಬಗ್ಗೆ ಚರ್ಚಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. 
 
ಸಿಎಂ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹಾಗೂ ಕರ್ನಾಟಕ ರಾಜ್ಯದ ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದಾರೆ. ಸಭೆಯಲ್ಲಿ ರಾಜ್ಯದಲ್ಲಿನ ಜನರನ್ನು ರಕ್ಷಿಸಲು ತುರ್ತು ನಿರ್ವಹಣಾ ಕೇಂದ್ರ ಸ್ಥಾಪನೆ ಬಗ್ಗೆ ನಿರ್ಣ ಕೈಗೊಂಡು ಈಗಾಗಲೇ ಸ್ಥಾಪಿಸಲಾಗಿದೆ. ಅಲ್ಲದೆ ಸಹಾಯವಾಣಿಯನ್ನೂ ಕೂಡ ಬಿಡುಗಡೆಗೊಳಿಸಲಾಗಿದೆ.  
 
ಸಹಾಯವಾಣಿ: ಟೋಲ್ ಫ್ರೀ ಸಂಖ್ಯೆ- 1070 ಕರೆ, 22340676, 22032582, 22353980
 
ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕನ್ನಡಿಗರನ್ನು ರಕ್ಷಿಸಲು ಮೊದಲ ಹಂತವಾಗಿ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ. ಅಗತ್ಯವಿದ್ದಲ್ಲಿ ವೈದ್ಯರ ತಂಡವನ್ನೂ ಕಳುಹಿಸಲಾಗುವುದು ಎಂದರು. 
 
ಇಬ್ಬರು ಅಧಿಕಾರಿಗಳಿರುವ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದ್ದು, ತಂಡದಲ್ಲಿ ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಹಾಗೂ ಐಪಿಎಸ್ ಅಧಿಕಾರಿ ಉಮೇಶ್ ಅವರು ತಂಡದಲ್ಲಿದ್ದು, ಈಗಾಗಲೇ ವಿಮಾನದ ಮೂಲಕ ನೇಪಾಳಕ್ಕೆ ತೆರಳುತ್ತಿದ್ದಾರೆ. 
 
ಮಾಹಿತಿಗಳ ಪ್ರಕಾರ, ಕರ್ನಾಟಕದಿಂದ ಪ್ರವಾಸಕ್ಕೆಂದು ತೆರಳಿದ್ದ ಸುಮಾರು 50 ಮಂದಿ ಕನ್ನಡಿಗರು ಹಾಗೂ ನಾಲ್ವರು ಮಕ್ಕಳು ತೆರಳಿದ್ದರು. ಈ ಎಲ್ಲರೂ ಕೂಡ ಕಠ್ಮಂಡುವಿನ ಪಶುಪತಿ ದೇವಾಲಯದ ಬಳಿ ಸಿಲುಕಿದ್ದಾರೆ ಎನ್ನಲಾಗಿದೆ.  

ನೇಪಾಳದ ಲುಂಜಂಗ್ ಎಂಬ ಪ್ರದೇಶ ಭೂ ಕಂಪನದ ಕೇಂದ್ರ ಬಿಂದುವಾಗಿದ್ದು, ಇಂದು ಬೆಳಿಗ್ಗೆ 11.26ರಿಂದ 11.29ರ ವರೆಗೆ ಸುಮಾರು ಮೂರು ನಿಮಿಷಗಳ ಕಾಲ ಅಗಾಧವಾಗಿ ಭೂಮಿ ನಡುಗಿತ್ತು. ಭೂ ಕಂಪನದ ಪ್ರಮಾಣ ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, 7.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ತಿಳಿಸಿದ್ದರು. ಆರಂಭದ 32 ನಿಮಿಷಗಳ ಒಳಗೆ ನೇಪಾಳದಲ್ಲಿ 10 ಭಾರಿ ಕಂಪನವಾಗಿತ್ತು. ಇಲ್ಲಿಯವರೆಗೂ 17 ಬಾರಿ ಕಂಪನ ಸಂಭವಿಸಿದೆ.  

ವೆಬ್ದುನಿಯಾವನ್ನು ಓದಿ