ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆ ಸಭೆ ಕರೆದ ಶಿಕ್ಷಣ ಸಚಿವರು

ಶುಕ್ರವಾರ, 22 ಮೇ 2015 (12:36 IST)
ಪಿಯುಸಿ ಫಲಿತಾಂಶದಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸಲು ಮುಂದಾಗಿರುವ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಇಲಾಖೆ ಸಚಿವ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. 
 
ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಸ್ತುತ ಸಭೆ ಕರೆದಿದ್ದು, ಸಮಸ್ಯೆ ಸಂಬಂಧ ಚರ್ಚಿಸಲಿದ್ದೇನೆ. ಆ ಬಳಿಕ ಮಧ್ಯಾಹ್ನ 1 ಗಂಟೆ ವೇಳೆಗೆ ಪತ್ರಿಕಾಗೋಷ್ಠಿ ಕರೆದು ಸರ್ಕಾರದ ಮುಂದಿನ ನಿರ್ಧಾರ ಏನು ಎಂಬುದನ್ನು ಪ್ರಕಟಿಸಲಿದ್ದೇನೆ ಎಂದರು. 
 
ಇದೇ ವೇಳೆ, ಅಗತ್ಯವಿದ್ದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಅಲ್ಲದೆ ಈ ಪ್ರಕರಣದಲ್ಲಿ ಮಂಡಳಿಯ ನಿರ್ದೇಶಕಿ ಗೋಡಬಲೆ ಅವರ ಪಾತ್ರವೇನು ಎಂದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇನೆ ಎಂದರು.  
 
ಇನ್ನು ಸಭೆಯು ಈಗಾಗಲೇ ಆರಂಭವಾಗಿದ್ದು, ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸಮಸ್ಯೆ ಉದ್ಭವಿಸಿರುವುದು ಯಾರಿಂದ, ಹೇಗೆ ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  
 
ಸಭೆಯಲ್ಲಿ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ ಹಾಗೂ ಪಿಯು ಪರೀಕ್ಷಾ ಮಂಡಳಿಯ ಜಂಟಿ ನಿರ್ದೇಶಕ ರವೀಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. 
 
ಇಂದು ನಡೆಯುತ್ತಿರುವ ಪ್ರತಿಭಟನೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ ಸಚಿವರಿಗೆ ಸಮಸ್ಯೆ ಏನೆಂಬುದನ್ನು ತಕ್ಷಣ ಬಗೆಹರಿಸಿ ಎಂದು ಸೂಚಿಸಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 
 
ಪ್ರತಿಭಟನೆಯು ತಾರಕಕ್ಕೇರಿರುವ ಪರಿಣಾಮ ಮಂಡಳಿಯ ನಿರ್ದೇಶಕಿ ಸ್ಥಾನದಿಂದ ಅಧಿಕಾರಿ ಸುಷ್ಮಾ ಗೋಡಬಲೆ ಅವರನ್ನು ಇತರೆ ಇಲಾಖೆಗಳಿಗೆ ವರ್ಗಾವಣೆ ಮಾಡುವ ಪ್ರಯತ್ನಗಳೂ ಚಾಲ್ತಿಯಲ್ಲಿವೆ ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ