ಮೇಯರ್ ಆಯ್ಕೆಗೆ ಮುಹೂರ್ತ ಫಿಕ್ಸ್: ಸೆ.11ಕ್ಕೆ ಯಾರಾಗಲಿದ್ದಾರೆ ಬಿಬಿಎಂಪಿ ಸಾರಥಿ ?!

ಬುಧವಾರ, 2 ಸೆಪ್ಟಂಬರ್ 2015 (15:34 IST)
ಬಿಬಿಎಂಪಿ ಫಲಿತಾಂಶ ಬಂದರೂ ಕೂಡ ಅಧಿಕಾರದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬ ವಿಚಾರದಲ್ಲಿ ಗೊಂದಲದಲ್ಲಿದ್ದ ಸರ್ಕಾರ ಕೊನೆಗೂ ಬಿಬಿಎಂಪಿ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ್ದು, ಸೆ.11ಕ್ಕೆ ಚುನಾವಣೆ ನಡೆಯಲಿದೆ. 
 
ಹೌದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಚುನಾವಣೆಗೆ ದಿನಾಂಕ ನಿಗದಿಗೊಳಿಸಿದೆ. 
 
ಒಟ್ಟು 260 ಮಂದಿ ಮತದಾರರು ಮತ ಚಲಾಯಿಸಲಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ 5 ಮಂದಿ ಲೋಕಸಭಾ ಸಂಸದರು, 8 ಮಂದಿ ರಾಜ್ಯಸಭಾ ಸದಸ್ಯರು, 28 ಮಂದಿ ವಿಧಾನಸಭಾ ಸದಸ್ಯರು, 21 ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ 198 ಮಂದಿ ಚುನಾಯಿತ ನೂತನ ಕಾರ್ಪೊರೇಟರ್‌ಗಳು ಮತ ಚಲಾಯಿಸಲಿದ್ದಾರೆ. 
 
ಇನ್ನು ಮೂಲಗಳ ಪ್ರಕಾರ, ಕಾಂಗ್ರೆಸ್‌ಗೆ ಮೇಯರ್ ಹಾಗೂ ಜೆಡಿಎಸ್‌ಗೆ ಉಪ ಮೇಯರ್ ಸ್ಥಾನಗಳು ಒಲಿಯಲಿವೆ ಎಂದು ಹೇಳಲಾಗುತ್ತಿದ್ದು, ಈ ಬಾರಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ಸಾಮಾನ್ಯ ವರ್ಗದ ಸದಸ್ಯರಿಗೆ ಮೀಸಲಿರಿಸಲಾಗಿದೆ. ಉಪ ಮೇಯರ್ ಸ್ಥಾನವು ಸಾಮಾನ್ಯ ವರ್ಗದ ಮಹಿಳಾ ಸದಸ್ಯರಿಗೆ ಮೀಸಲಿರಿಸಲಾಗಿದ್ದು, ಜೆಡಿಎಸ್ ಪಾಲಾಗುವ ಸಂಭವವಿದೆ. ಇದೇ ದಿನ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೂ ಕೂಡ ಚುನಾವಣೆ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ