ಗ್ರಾ. ಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಜೆಡಿಎಸ್ ಸದಸ್ಯರಿಂದ ದಾಂಧಲೆ

ಬುಧವಾರ, 1 ಜುಲೈ 2015 (16:03 IST)
ಗ್ರಾಮ ಪಂಚಾಯತ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಾಗ ಜೆಡಿಎಸ್ ಬೆಂಬಲಿಗರು ಗ್ರಾಮ ಪಂಚಾಯತ್ ಕಚೇರಿ ಹಾಗೂ ಚುನಾವಣಾಧಿಕಾರಿಯ ಮೇಲೆ ತಮ್ಮ ಪ್ರತಾಪ ತೋರಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ತುಂಗಣಿ ಗ್ರಾಮದಲ್ಲಿ ನಡೆದಿದೆ. 
 
ಪ್ರಕರಣವೇನು?
ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಗೌಪ್ಯ ಚುನಾವಣೆ ನಡೆಸಲಾಗಿತ್ತು. ಬಳಿಕ ಚುನಾವಣಾಧಿಕಾರಿ ಪ್ರಕಾಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಘೋಷಿಸಿದರು. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಬೆಂಬಲಿಗರು ಕಾಂಗ್ರೆಸ್‌ಗಿಂತ ನಾವೇ ಹೆಚ್ಚು ಸದಸ್ಯ ಬಲವನ್ನು ಹೊಂದಿದ್ದೇವೆ. ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಲು ಹೇಗೆ ಸಾಥ್ಯ ಎಂದು ಉದ್ರಿಕ್ತಗೊಂಡು ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲದೆ ಚುನಾವಣಾಧಿಕಾರಿ ಪ್ರಕಾಶ್ ಮೇಲೆಯೂ ಕೂಡ ಹಲ್ಲೆ ನಡೆಸಲು ಯತ್ನಿಸಿದರು ಎನ್ನಲಾಗಿದೆ. 
 
ವಿಷಯ ತಿಳಿದ ಕನಕಪುರ ಪೊಲೀಸರು, ಕೂಡಲೇ ಸ್ಥಳಕ್ಕಾಗಮಿಸಿ ಲಾಠಿ ಪ್ರಹಾರ ನಡೆಸುವ ಮೂಲಕ ಉದ್ರಿಕ್ತರನ್ನು ಚದುರಿಸಿದರು. ಇದರಿಂದ ಪರಿಸ್ಥಿತಿ ತಿಳಿಯಾಯಿತು. 
 
ಇನ್ನು ಜೆಡಿಎಸ್ 9 ಮಂದಿ ಸದಸ್ಯ ಬಲ ಹೊಂದಿದ್ದರೆ, ಕಾಂಗ್ರೆಸ್ 8 ಸದಸ್ಯ ಬಲ ಹೊಂದಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.  
 
ಈ ಸಂಬಂಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ