ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರೆದುರೇ ನಕಲು ಮಾಡಿದ ಭಾವೀ ಶಿಕ್ಷಕರು

ಶನಿವಾರ, 25 ಜುಲೈ 2015 (13:17 IST)
ಪರೀಕ್ಷೆಗಳನ್ನೆದುರಿಸುವ ವೇಳೆ ವಿದ್ಯಾರ್ಥಿಗಳು ನಕಲು ಮಾಡುತ್ತಾರೆ ಎಂಬುದು ಮಾಮೂಲಿಯ ಸಂಗತಿ. ಆದರೆ ಮುಂದೆ ತಿದ್ದಿ ಬುದ್ಧಿ ಹೇಳುವ ಭಾವೀ ಶಿಕ್ಷಕರೇ ನಕಲು ಮಾಡುತ್ತಾರೆ ಎಂದರೆ ನೀವು ನಂಬುತ್ತೀರಾ...?
 
ಹೌದು, ಅಂತಹ ಅಪರೂಪದ ಸಂಗತಿ ಬೀದರ್ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಬಿ.ಎಡ್ ಶಿಕ್ಷಣಾರ್ಥಿಗಳೇ ಯಾವುದೇ ಅಂಜಿಕೆ, ಅಳುಕಿಲ್ಲದೆ ಪರೀಕ್ಷಾ ಕೊಠಡಿಯಲ್ಲಿ ನಕಲು ಮಾಡಿದ್ದಾರೆ. ಈ ಸಂಗತಿಯು ನಗರದ ಪ್ರತಾಪನಗರದಲ್ಲಿರುವ ವಿದ್ಯಾವಿಕಾಸ ಎಂಬ ಬಿ.ಎಡ್ ಕಾಲೇಜಿನಲ್ಲಿ ನಡೆದಿದ್ದು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರ ಸಮ್ಮುಖದಲ್ಲಿಯೇ ರಾಜಾರೋಷವಾಗಿ ನಕಲು ಕಾರ್ಯ ನಡೆದಿದೆ. 
 
ಈ ವೇಳೆಯ ವಿದ್ಯಾರ್ಥಿಗಳ ಎಲ್ಲಾ ಚಲನವಲನಗಳು ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಕ್ಯಾಮರಾಗಳನ್ನು ನೋಡುತ್ತಿದ್ದಂತೆ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದ ಚೀಟಿಗಳನ್ನು ಹೊರ ಎಸೆದಿದ್ದಾರೆ. 
 
ಇನ್ನು 200ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಈ ಸಾಮೂಹಿಕ ನಕಲು ಪ್ರಕ್ರಿಯೆಯಲ್ಲಿ ತೊಡಗಿದ್ದು, ವಿದ್ಯಾರ್ಥಿಗಳ ವಿರುದ್ಧ ಸರ್ಕಾರ ಮುಂದೆ ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿ.ಎಡ್ ಪರೀಕ್ಷೆಯು ನಿನ್ನೆಯಿಂದ ಆರಂಭವಾಗಿದ್ದು, ಮುಂದಿನ ಜುಲೈ 28ರ ವರೆಗೆ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ