ಆಂಗ್ಲ ಮಾಧ್ಯಮ ಶಿಕ್ಷಣ ಜಾರಿ ವಿವಾದ: ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್

ಬುಧವಾರ, 25 ಫೆಬ್ರವರಿ 2015 (18:19 IST)
ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ, ಸರಕಾರಕ್ಕೆ ನಿರ್ದೇಶನ ನೀಡುವಂತೆ ಖಾಸಗಿ ಶಾಲಾ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಎಜಿ ಪ್ರೊ. ರವಿವರ್ಮಕುಮಾರ್ ಅವರಿಂದ ಸರ್ಕಾರದ ಪರವಾದ ಹೇಳಿಕೆಗಳನ್ನು ಆಲಿಸಿ ದಾಖಲಿಸಿಕೊಂಡಿತು.  
 
ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪದ್ದತಿಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಈಗಾಗಲೇ ಖಾಸಗಿ ಶಾಲೆಗಳ ಪರವಾಗಿಯೇ ಆದೇಶಿಸಿದ್ದರೂ ಕೂಡ ರಾಜ್ಯ ಸರ್ಕಾರವು ನಿಯಮವನ್ನು ಪಾಲಿಸದೆ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಖಾಸಗಿ ಶಾಲೆಗಳ ಒಕ್ಕೂಟವು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಕೋರ್ಟ್, ಅಡ್ವೋಕೇಟ್ ಜನರಲ್ ಅವರಿಂದ ಹೇಳಿಕೆಗಳನ್ನು ಆಲಿಸಿತು.
 
ಇನ್ನು ಸರ್ಕಾರದ ಪರವಾಗಿ ವಾದ ಮಂಡಿಸಿದ ಎಜಿ ಪ್ರೊ.ರವಿವರ್ಮಕುಮಾರ್, ಸರ್ಕಾರವೂ ಕೂಡ ಈ ವಿಷಯ ಸಂಬಂಧ ಹೊರಡಿಸಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ಸುಪ್ರೀಂಗೆ ಕ್ಯುರೇಟೀವ್ ಅರ್ಜಿಯನ್ನು ಸಲ್ಲಿಸಿದ್ದು, ವಿಚಾರಣೆಗೆ ಇನ್ನು ಬರಬೇಕಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ಕನ್ನಡ ಮಾಧ್ಯಮಗಳಲ್ಲಿ ಶಿಕ್ಷಣ ನೀಡಲು ಸರ್ಕಾರ ತಿಳಿಸಿದೆಯೇ ಹೊರತು ಅಡ್ಡಿಪಡಿಸುತ್ತಿಲ್ಲ. ಅಲ್ಲದೆ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಕೇಂದ್ರ ಸರ್ಕಾರ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕಿದ್ದು, ರಾಷ್ಟ್ರೀಯ ನೀತಿಯಲ್ಲಿ ಬದಲಾವಣೆ ತಂದು ಅನುಷ್ಠಾನಗೊಳಿಸಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಕೂಡ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. 
 
ಅಷ್ಟೇ ಅಲ್ಲದೆ, ಸರ್ಕಾರವೂ ಕೂಡ ಈ ಸಂಬಂಧ ಮುಂದೆ ನಡೆಯಲಿರುವ ಬಜೆಟ್‌ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಏಪ್ರಿಲ್ ತಿಂಗಳ ಒಳಗಾಗಿ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಸಿಗಲಿದ್ದು, ಎಲ್ಲಾ ಸಮಸ್ಯೆಗಳೂ ಕೂಡ ಬಗೆಹರಿಯಲಿವೆ ಎಂದು ಕೋರ್ಟ್ ಗಮನಕ್ಕೆ ತಂದರು.  
 
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಏಪ್ರಿಲ್ ವರೆಗೂ ಕಾಯಲು ಸಾದ್ಯವಿಲ್ಲ. ಇದರಿಂದ ಮಕ್ಕಳಿಗೆ ತೊಂಡರೆಯಾಗುತ್ತದೆ. ಹಾಗಾಗಿ ಶೀಘ್ರವೇ ವಿಷಯದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ತಿಳಿಸಿ ವಿಚಾರಣೆಯನ್ನು ಫೆ. 27ಕ್ಕೆ ಮುಂದೂಡಿತು. 
 
ಈ ಎಲ್ಲಾ ಆಗು ಹೋಗುಗಳನ್ನು ಗಮನಿಸಿದಲ್ಲಿ ವಿಷಯ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶ ನೀಡುವ ಸಾಧ್ಯತೆ ಕಂಡು ಬರುತ್ತಿದೆ.  

ವೆಬ್ದುನಿಯಾವನ್ನು ಓದಿ