ಐಐಟಿಯನ್ನು ಧಾರವಾಡದಲ್ಲಿಯೇ ಸ್ಥಾಪಿಸಿ: ಸರ್ಕಾರದ ವಿರುದ್ಧ ಪ್ರತಿಭಟನೆ

ಮಂಗಳವಾರ, 6 ಅಕ್ಟೋಬರ್ 2015 (12:02 IST)
ಐಐಟಿಯನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಐಐಟಿ ಕೇಂದ್ರ ಸ್ಥಾಪನೆ ಹೋರಾಟ ಸಮಿತಿಯ ಸದಸ್ಯರು ನಗರದಲ್ಲಿಂದು ಪ್ರತಿಭಟನೆ ನಡೆಸುತ್ತಿದ್ದು, ಧಾರವಾಡದಲ್ಲಿಯೇ ಐಐಟಿ ಕೇಂದ್ರ ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. 
ನಗರದ ಕಡಪಾ ಮೈದಾನದ ಎದುರು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಧಾರವಾಡದಲ್ಲೇ ಐಐಟಿ ಕೇಂದ್ರ ಸ್ಥಾಪನೆಯಾಗಬೇಕು ಎಂದು ಘೋಷಣೆಗಳನ್ನು ಕೂಗಿದರು. ನಂತರ ಪ್ರತಿಭಟನಾ ಮೆರವಣಿಗೆ ನಡೆಸಿ ಆಲೂರು ವೆಂಕಟರಾವ್‌ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರು ಹಾಗೂ ಶ್ರೇಯಾ ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಬೆಂಬಲ ಸೂಚಿಸಿದ್ದರು.  
 
ಇದೇ ವೇಳೆ, ಕೇಂದ್ರ ಸರ್ಕಾರ ಧಾರವಾಡಕ್ಕೆ ನೀಡಿರುವ ಐಐಟಿಯನ್ನು ರಾಯಚೂರಿಗೆ ವರ್ಗಾವಯಿಸುವಂತೆ ಆಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಕೂಡಲೇ ಆ ಪತ್ರವನ್ನು ಸಿಎಂ ವಾಪಸ್‌ ಪಡೆಯಬೇಕು. ಯಾವುದೇ ಕಾರಣಕ್ಕೂ ಐಐಟಿ ಸ್ಥಳಾಂತರಕ್ಕೆ ಬಿಡುವುದಿಲ್ಲ ಎಂದೂ ಕೂಡ ಪ್ರತಿಭಟನಾಕಾರರು ಎಚ್ಚರಿಸಿದರು. 

ವೆಬ್ದುನಿಯಾವನ್ನು ಓದಿ