ಗೃಹ ಸಚಿವ ಕೆ.ಜೆ. ಜಾರ್ಜ್‌ಗೆ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಸಲಹೆಗಾರ

ಶುಕ್ರವಾರ, 1 ಆಗಸ್ಟ್ 2014 (13:09 IST)
ಶಾಸಕರು ಮತ್ತು ಸಚಿವರ ವಿರೋಧದ ಮಧ್ಯೆಯೂ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಸಲಹೆಗಾರರನ್ನಾಗಿ ಸಿಎಂ ಸಿದ್ದರಾಮಯ್ಯ ನೇಮಕಗೊಳಿಸಿದ್ದಾರೆ.
 
ಗುರುವಾರ ಸಂಜೆ ಈ ಆದೇಶ ಹೊರಡಿಸಲಾಗಿದ್ದು, ಕೆಂಪಯ್ಯ ಅವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಲಾಗಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ಕೆಂಪಯ್ಯ ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಪ್ರಸ್ತಾಪ ಇತ್ತು. ಆದರೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಬಳಿಕ ಶಾಸಕರ ವಿರೋಧ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಕೈಬಿಟ್ಟು ಸಿಎಂ ಸಿದ್ದರಾಮಯ್ಯ ಅವರ ಆಂತರಿಕ ಭದ್ರತೆ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಚಿಂತನೆ ನಡೆದಿತ್ತು. 
 
ಆದರೆ ಕೆಂಪಯ್ಯ ಸೇವೆಯಲ್ಲಿ ಇರುವಾಗ ಹಲವು ಆರೋಪ ಎದುರಿಸುತ್ತಿದ್ದರು. ಆ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಈ ನೇಮಕ ಬೇಡ ಎಂದು ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರಿಗೆ ದೂರು ನೀಡಿದ್ದರು. ಸ್ವತಃ ಗೃಹ ಸಚಿವ ಕೆ.ಜೆ.ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದ್ದರು.
 
ಆದರೆ ಇದ್ಯಾವ ವಿರೋಧವನ್ನೂ ಲೆಕ್ಕಿಸದೇ ಕೆಂಪಯ್ಯ ಅವರನ್ನು ಗೃಹ ಸಚಿವರ ಸಲಹೆಗಾರರನ್ನಾಗಿ ಸಿದ್ದರಾಮಯ್ಯ ನೇಮಕಗೊಳಿಸಿದ್ದಾರೆ

ವೆಬ್ದುನಿಯಾವನ್ನು ಓದಿ