ರಾಜೀನಾಮೆ ಸಂಧಾನಕ್ಕೆ ಆಗಮಿಸಿದ ಅಬಕಾರಿ ಸಚಿವರು: ಸಿಎಂಗೆ ಮುಖಭಂಗ

ಗುರುವಾರ, 29 ಜನವರಿ 2015 (11:10 IST)
ಸಿಎಂ ಜೊತೆ ಚರ್ಚಿಸಲು ಇಂದು ನಗರಕ್ಕೆ ಆಗಮಿಸಬೇಕಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ, ಆಗಮಿಸಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಈ ಮೂಲಕ ಜಾರಕಿಹೋಳಿ, ತಮ್ಮ ಹಾಗೂ ಸಿಎಂ ನಡುವಿನ ವೈಮನಸ್ಸನ್ನು ಹೊರ ಹಾಕಿದ್ದು, ರಾಜೀನಾಮೆ ಹಿಂಪಡೆಯುವಂತೆ ಜಾರಕಿಹೋಳಿ ಅವರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. 
 
ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ದೂರವಾಣಿ ಕರೆ ಮಾಡಿದ್ದು, ರಾಜೀನಾಮೆ ಸಂಬಂಧ ಚರ್ಚಿಸಲು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದೇನೆ. ಅದಕ್ಕೆ ಸಚಿವರು ಒಪ್ಪಿಗೆ ನೀಡಿದ್ದು, ನಾಳೆ ಬೆಳಗ್ಗೆ ರಾಜಧಾನಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದರು. 
 
ಇನ್ನು ಸಚಿವ ಜಾರಕಿಹೋಳಿ ಸಿಎಂ ಸಿದ್ದರಾಮಯ್ಯನವರಿಗೆ ಇಂದು ಕೆಲ ಷರತ್ತುಗಳನ್ನು ಹಾಕಿದ್ದು, ಕೂಡಲೇ ಸಂಪುಟವನ್ನು ವಿಸ್ತರಿಸಬೇಕು. ಅಲ್ಲದೆ ಸಂಪುದಲ್ಲಿ ನನಗೆ ಮಹತ್ವದ ಖಾತೆಯನ್ನು ಹಂಚಿಕೆ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ ಎನ್ನಲಾಗಿದ್ದು, ಅಲ್ಲದೆ ಸಮಾಜ ಕಲ್ಯಾಣ ಇಲಾಖೆ ಮೇಲೆ ಅವರು ಕಣ್ಣಿರಿಸಿದ್ದಾರೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. 
 
ನಿನ್ನೆ ನಡೆದಿದ್ದ ಬೆಳವಣಿಗೆಗಳು:
ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಸಲಹೆಗಾರ ಕೆಂಪಯ್ಯ ಅವರ ಆಗಮನದಿಂದ ಕೆಂಡಾಮಂಡಲರಾಗಿದ್ದ ಜಾರಕಿಹೊಳಿ, ಸಂಧಾನ ಮಾಡಲು ನೀವು ಯಾರು, ನೀವೇನೂ ಪಕ್ಷದ ಹೈಕಮಾಂಡಾ,  ನೀವ್ಯಾರು ನನ್ನ ಸಮಸ್ಯೆ ಬಗೆಹರಿಸೋದಕ್ಕೆ ? ಎಂದು ನೇರವಾಗಿ ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು. 
 
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ಸುಮಾರು ಐದು ಗಂಟೆ ಕಾಲ ಸಭೆ ನಡಿಸಿದ್ದ ಸತೀಶ್ ಜಾರಕಿಹೋಳಿ, ಪಕ್ಷದ ಶಾಸಕರು, ಜಿಲ್ಲಾ ಕಾಂಗ್ರೆಸ್ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಈ ವೇಳೆ, ಜಿಲ್ಲೆಯ ಶಾಸಕರು, ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಸಚಿವ ಸ್ಥಾನದಲ್ಲಿ ಮುಂದುವರಿಯುವಂತೆ ಒತ್ತಾಯಿಸುತ್ತಿದ್ದಾರೆ ಎಂದಿದ್ದರು. 
 
ಬಳಿಕ, ನನ್ನ ರಾಜಿನಾಮೆ ಪ್ರಕರಣದಿಂದ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಅವರಿಗೆ ಮುಜುಗರ ಆಗಬಾರದು. ಸಮಾಜ ಸಂಘಟನೆ, ಸಮಾಜ ಸೇವೆ ಮಾಡಲು ಅವಕಾಶ ದೊರೆಯುತ್ತಿಲ್ಲ. ನನಗೆ ಕೆಲಸ ಮಾಡಲು ಹೆಚ್ಚಿನ ಅವಕಾಶ ಬೇಕು. ಹಾಗಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ನನ್ನ ರಾಜಿನಾಮೆ ಹಿಂದೆ ಬೇರಾವುದೇ ಸಮಸ್ಯೆ  ಇಲ್ಲ ಎಂದು ತಿಳಿಸಿದ್ದರು.
 
ಸಿಎಂ ಸಿದ್ದರಾಮಯ್ಯ ಕೂಡ ನನ್ನ ಹಾಗೂ ಜಾರಕಿಹೋಳಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರು ತಮ್ಮ ರಾಜೀನಾಮೆ ಪತ್ರವನ್ನು ವಾಪಾಸ್ ಪಡೆಯಲಿದ್ದಾರೆ ಎಂಬ ಭರಸೆಯನ್ನು ವ್ಯಕ್ತಪಡಿಸಿದ್ದರು.  

ವೆಬ್ದುನಿಯಾವನ್ನು ಓದಿ