ಸಂಘಟನೆಗಳು ಬಹಿರಂಗ ಸಭೆ ನಡೆಸುವುದು ಸರಿಯಲ್ಲ: ಉಮಾಶ್ರೀ

ಗುರುವಾರ, 19 ಫೆಬ್ರವರಿ 2015 (13:26 IST)
ಸರ್ಕಾರದ ಮುಖ್ಯಮಂತ್ರಿ ಗದ್ದುಗೆಗೆ ಸಂಬಂಧಿಸಿದಂತೆ ಹಲವು ದಲಿತ ಸಂಘಟನೆಗಳು ಬಹಿರಂಗವಾಗಿ ಸಭೆ ಸೇರುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರಸ್ ಪಕ್ಷದ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದು ಸಚಿವೆ ಉಮಾಶ್ರೀ ಗುಡುಗಿದ್ದಾರೆ.
 
ನಗರದಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಮಾಧ್ಯಮಗಳೊಂದಿಗೆ ಮಾತನಾಡಿದರು. ಒಂದು ಪಕ್ಷ ಆಡಳಿತ ನಡೆಸುತ್ತಿರುವಾಗ ಹಲವು ಸಂಘಟನೆಗಳು ಬಹಿರಂಗ ಸಭೆ ಸೇರಿ ಆಡಳಿತ ಪಕ್ಷ ಅಥವಾ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಬಹಿರಂಗವಾಗಿ ಅವಲೋಕಿಸುವುದು ಅಥವಾ ಚರ್ಚಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ತಮ್ಮ ನೆಚ್ಚಿನ ನಾಯಕರಿಗೆ ಸಿಎಂ ಗದ್ದುಗೆ ಕೊಡಿಸುವ ತವಕ ಸಂಘಟನೆಗಳ ಮುಖಂಡರಿಗಿದ್ದಲ್ಲಿ ಪಕ್ಷದ ಹೈಕಮಾಂಡ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಿ. ಆದರೆ ಬಹಿರಂಗವಾಗಿ ಚರ್ಚಿಸುವುದು ಎಷ್ಟು ಸರಿ ಎಂದು ಬೇಸರ ವ್ಯಕ್ತಪಡಿಸಿದರು. 
 
15ಕ್ಕೂ ಹೆಚ್ಚು ದಲಿತ ಸಂಘಟನೆಗಳ ಹಲವು ಮುಖಂಡರು ನಿನ್ನೆ ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಸಭೆ ಸೇರಿ ತಮ್ಮ ದಲಿತ ನಾಯಕ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ರಾಜ್ಯದಲ್ಲಿ ಸಿಎಂ ಸ್ಥಾನ ನೀಡಬೇಕು. ನೀಡಲಿಲ್ಲ ಎಂದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಏಕಿರಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವೆ ಉಮಾಶ್ರೀ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ