ರಾಜ್ಯದಲ್ಲಿ ಮುಂದುವರೆದ ಆತ್ಮಹತ್ಯಾ ಸರಣಿ: ಮಹಿಳೆಯರು ಸೇರಿದಂತೆ ಮೂರು ಸಾವು

ಭಾನುವಾರ, 2 ಆಗಸ್ಟ್ 2015 (15:10 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು ಇಂದು ಒಟ್ಟು ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯಾದಗಿರಿಯಲ್ಲಿ ತಾಯಮ್ಮ (40) ಎಂಬ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗುಂಜನೂರು ಗ್ರಾಮದ ನಿವಾಸಿಯಾಗಿದ್ದ ತಾಯವ್ವ ಪತಿ ಗುಂಜಾಲಪ್ಪ ಪಾಲುದಾರಿಕೆಯಲ್ಲಿ ಕೃಷಿ ಮಾಡುತ್ತಿದ್ದರು. ವಿಪರೀತ ಸಾಲ ಮಾಡಿಕೊಂಡಿದ್ದ ದಂಪತಿ ತೊಗರಿ ಮತ್ತು ಹೆಸರು ಬೇಳೆ ಬಿತ್ತಿದ್ದರು. ಆದರೆ ಮಳೆ ಕೈಕೊಟ್ಟ ಪರಿಣಾಮ ಬೆಳೆಯೂ ಕೆಗೆಟುಕಲಿಲ್ಲ. ತಾನು ಪಡೆದಿದ್ದ 4 ಲಕ್ಷ ಸಾಲ ತೀರಿಸಲಾಗದ ಕೊರಗಿನಿಂದ ತಾಯವ್ವ ನಿನ್ನೇ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದರು. ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಸಾವನ್ನಪ್ಪಿದ್ದಾರೆ. 
 
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಸಹ ರೈತ ಮಹಿಳೆ ತಂಗೆವ್ವಾ ಭಾಡೇಕರ(28) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಲೂಕಿನ ಜೊಡಕುರಳಿ ಗ್ರಾಮದ ತಂಗೆವ್ವಾ ಪತಿ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
 
ನಾಲ್ಕು ಎಕರೆ ಜಮೀನು ಹೊಂದಿದ್ದ ಈಕೆ ಬ್ಯಾಂಕ್‌ ಮತ್ತು ಕೈ ಸಾಲವನ್ನು ಮಾಡಿಕೊಂಡಿದ್ದರು.ಎರಡು ಲಕ್ಷ ಸಾಲ ಮಾಡಿ ಕಬ್ಬು ಬೆಳೆದಿದ್ದರು. 5 ಮಕ್ಕಳ ಜವಾಬ್ದಾರಿಯೂ ಅವರ ಮೇಲಿತ್ತು .ಆದರೆ ಬೆಳೆಗೆ ಸರಿಯಾದ ಬೆಲೆ ನಿಗದಿಯಾಗದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ನೊಂದಿದ್ದ ಅವರು ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ. ಚಿಕ್ಕೋಡಿ ಪೋಲಿಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
 
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿಯಲ್ಲಿ 22 ವರ್ಷದ ರೈತ ದೇವರಾಜು ಕೂಡ ಸಾಲಬಾಧೆಯಲ್ಲಿ ಬೆಂದು ನೇಣಿಗೆ ಕೊರಳೊಡ್ಡಿದ್ದಾರೆ. ದೇವರಾಜು ಕಬ್ಬು, ರಾಗಿ ಹಾಗೂ ಬೀನ್ಸ್ ಬೆಳೆ ಬೆಳೆದಿದ್ದರು. ಇದಕ್ಕಾಗಿ 4 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಆದರೆ ರಾಗಿ ಮತ್ತು ಬೀನ್ಸ್ ಬೆಳೆ ಕೈಕೊಟ್ಟಿತ್ತು. ಕಬ್ಬು ಕಟಾವಿಗೆ ಬಂದಿಲ್ಲ. ಇದರಿಂದ ದಿಕ್ಕು ಕಾಣದಾದ ಯುವರೈತ ದೇವರಾಜು ಜಮೀನಿನ ಬಳಿಯಿದ್ದ ಸೇತುವೆಗೆ ನೇಣು ಬಿಗಿದುಕೊಂಡು ಪ್ರಾಣ ತೆತ್ತಿದ್ದಾನೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 
 
ದೇವರಾಜು ಸಾವಿನೊಂದಿಗೆ ಕೇವಲ ಮಂಡ್ಯದಲ್ಲಿಯೇ ಪ್ರಾಣ ಕಳೆದುಕೊಂಡ ರೈತರ ಸಂಖ್ಯೆ 36ರ ಕ್ಕೇರಿದೆ. 

ವೆಬ್ದುನಿಯಾವನ್ನು ಓದಿ