ರೈತರ ಆತ್ಮಹತ್ಯೆ ಸರಣಿ ಮುಂದುವರಿಕೆ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಶನಿವಾರ, 4 ಜುಲೈ 2015 (11:46 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಇನ್ನೂ ಮುಂದುವರಿದಿದ್ದು, ಜಿಲ್ಲೆಯಲ್ಲಿ ಇಂದು ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. 
 
ಪರಮಣ್ಣ ತಳವಾರ(45) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು, ಜಿಲ್ಲೆಯ ಸುರಪುರ ತಾಲೂಕಿನ ಮುದಲೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. 
 
ಪ್ರಕರಣದ ಹಿನ್ನೆಲೆ: ಈತ 14 ಎಕರೆ ಜಮೀನು ಹೊಂದಿದ್ದು, ಸುಮಾರು ಆರು ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಸಾಲವನ್ನು ತೀರಿಸಲಾಗದೆ ಮನನೊಂದ ಈತ ನಿನ್ನೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
 
ವಿಷ ಸೇವಿಸಿದ್ದನ್ನು ಕಂಡ ಸ್ಥಳೀಯರು, ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾನೆ ಎಂದು ಹೇಳಲಾಗಿದೆ. 
 
ಈ ಸಂಬಂಧ ಸುರಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 
 
ರೈತರ ಈ ಆತ್ಮಹತ್ಯೆ ಸರಣಿ ಮುಂದುವರಿದಿರುವ ಪರಿಣಾಮ ಕಳೆದ ಜೂನ್ 8ರಿಂದ ಇಲ್ಲಿಯವರೆಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಮಂಡ್ಯ ಜಿಲ್ಲೆವೊಂದರಲ್ಲಿಯೇ ನಾಲ್ವರು ಪ್ರಾಣ ತೆತ್ತಿದ್ದಾರೆ. ಇನ್ನು ಮೈಸೂರು-2, ಹಾವೇರಿ-1, ಹಾಸನ-2, ಬೆಳಗಾವಿ-1 ಹಾಗೂ ಯಾದಗಿರಿಯಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೂನ್ 8ರಂದು ಬೆಳಗಾವಿಯ ಬಡಾಲ ಅಂಕಲಗಿ ಗ್ರಾಮದ ನಿವಾಸಿ ಗುರುನಾಥ್ ಸಂಪಾಗಾವಿ(51) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಮೊದಲ ಆತ್ಮಹತ್ಯೆಯಾಗಿತ್ತು. 

ವೆಬ್ದುನಿಯಾವನ್ನು ಓದಿ