ರೈತರ ಆತ್ಮಹತ್ಯೆ, ಸೂಕ್ತವಾಗಿ ಸ್ಪಂದಿಸದ ಸರ್ಕಾರ, ಕ್ಯಾರೆ ಎನ್ನದ ಸಚಿವರು: ಕುಮಾರಸ್ವಾಮಿ ಆರೋಪ

ಬುಧವಾರ, 25 ನವೆಂಬರ್ 2015 (14:09 IST)
ರೈತರ ಆತ್ಮಹತ್ಯೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡ ಕುಮಾರಸ್ವಾಮಿ ತೀವ್ರ ವಾಗ್ದಾಳಿ ಮಾಡಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆದಿದೆ. ನಮ್ಮದು ಅಹಿಂದ ಸರ್ಕಾರವೆಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅಹಿಂದ ರೈತರೇ ಹೆಚ್ಚು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಮನೆಗಳಿಗೆ ಯಾವೊಬ್ಬ ಸಚಿವರೂ ತೆರಳುತ್ತಿಲ್ಲ. ಸಿಎಂ ಸೂಚಿಸಿದರೂ ಯಾವ ಸಚಿವರೂ ಕ್ಯಾರೇ ಎನ್ನುತ್ತಿಲ್ಲ. ಹಾಗಾದರೆ  ಸಚಿವರಿಗೆ ಪ್ರವಾಸ ಭತ್ಯೆ ಕೊಡುವುದು ಏಕೆಂದು ಅವರು ಪ್ರಶ್ನಿಸಿದರು.

 ರೈತರಿಗೆ ಟೋಪಿ ಹಾಕುವಂತೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಟೀಕಿಸಿದರು.ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಿಲ್ಲ, ರೈತರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿಲ್ಲ. ಹೀಗೆ ಸೂಕ್ತ ಸ್ಪಂದನೆ ಸಿಗದೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಮಾರ ಸ್ವಾಮಿ ಮಾತಿಗೆ ಜಗದೀಶ್ ಶೆಟ್ಟರ್ ದನಿಗೂಡಿಸಿದರು. 
 
 ಕೇಂದ್ರ ಸರ್ಕಾರ ರೈತರಿಗೆ  ಧರ್ಮಕ್ಕೆ ಹಣ ಕೊಡುತ್ತಿಲ್ಲ. ನಮಗೆ ಕೊಡಬೇಕಾದ ಪಾಲು ಕೊಟ್ಟರೆ ಸಾಕು ಎಂದು ಕೇಂದ್ರಸರ್ಕಾರದ ವಿರುದ್ಧ ಕೆಂಡಕಾರಿದರು. ನರೇಗಾ ಯೋಜನೆ ಅನುಷ್ಠಾನವನ್ನು ಕುರಿತು ಎಚ್‌ಡಿಕೆ ಗರಂ ಆದರು.  ನರೇಗಾ ಯೋಜನೆ ಹೆಸರಲ್ಲಿ ರಾಯಚೂರಿನಲ್ಲಿ 34 ಲಕ್ಷ ರೂ. ಲೂಟಿ ಮಾಡಲಾಗಿದೆ. ನರೇಗಾ ಯೋಜನೆ ಮರೇಗಾ ಯೋಜನೆಯಾಗುತ್ತಿದೆ ಎಂದು ಎಚ್‌ಡಿಕೆ ಟೀಕಿಸಿದರು. 

ವೆಬ್ದುನಿಯಾವನ್ನು ಓದಿ