ರೈತರ ಆತ್ಮಹತ್ಯೆ: ಮಂಡ್ಯಕ್ಕೆ ನಟಿ ರಮ್ಯಾ ದಿಢೀರ್ ಭೇಟಿ

ಮಂಗಳವಾರ, 28 ಜುಲೈ 2015 (15:58 IST)
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ನಟಿ, ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಅವರು ಇಂದು ಯಾವುದೇ ಮುನ್ಸೂಚನೆ ನೀಡದೆ ಜಿಲ್ಲೆಗೆ ದಿಢೀರ್ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
 
ಕಳೆದ 2014ರ ಜೂನ್ 16ರಂದು ಅವರು ಮಂಡ್ಯ ಜಿಲ್ಲೆಗೆ ನೀಡಿದ್ದ ಕೊನೆಯ ಭೇಟಿಯಾಗಿತ್ತು. ಆ ಬಳಿಕ ಒಂದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ತಮ್ಮ ನಾಯಕರಿಗೆ ಅಥವಾ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಹಿತಿ ನೀಡದೆ ದಿಢೀರ್ ಎಂದು ಭೇಟಿಯಾಗಿರುವ ರಮ್ಯಾ ಮಾಧ್ಯಮಗಳ ಕೈಗೂ ಸಿಕ್ಕಿಲ್ಲ. 
 
ಬೆಳ್ಳಂ ಬೆಳಗ್ಗೆಯೇ ಜಿಲ್ಲೆಗೆ ಆಗಮಿಸಿದ ರಮ್ಯಾ, ತಾಲೂಕಿನ ಪಣಕನಹಳ್ಳಿ ನಿವಾಸಿ, ಮೃತ ರಾತ ಮಹೇಶ್ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಇದೇ ವೇಳೆ,50000 ರೂ. ಪರಿಹಾರ ನೀಡಿದರು. ಬಳಿಕ ಕೆ.ಆರ್.ಪೇಟೆ, ಪಾಂಡವಪುರ ತಾಲೂಕುಗಳಿಗೆ ಭೇಟಿ ನೀಡಿ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಕಬ್ಬಿನ ತೋಟಕ್ಕೆ ಬೆಂಕಿ ಹಚ್ಚಿ ಅದರೊಳಗೇ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ನಿಂಗೇಗೌಡ ಅವರ ನಿವಾಸಕ್ಕೂ ಕೂಡ ಭೇಟಿ ನೀಡಿದ್ದಾರೆ ಎನ್ನಲಾಗಿದೆ. 
 
ಇನ್ನು ಈ ಸಂಬಂಧ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದು, ಮಧ್ಯಾಹ್ನ 1 ಗಂಟೆಗೆ ಭೋಜನಕ್ಕೆ ಆಗಮಿಸುವುದಾಗಿ ತಿಳಿಸಿದ್ದರು. ಆದರೆ ಭೋಜನ ಮಾಡಿಟ್ಟು ಕಾದು ಕುಳಿತಿದ್ದೇವೆ. ಬರಲೇ ಇಲ್ಲ ಎಂದಿದ್ದಾರೆ. 
 
ಇನ್ನು ಜಿಲ್ಲೆಯಲ್ಲಿ ಸರಣಿಯೋಪಾದಿಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಕೂಡ ಸಂಸದೆಯಾಗಿ ಜಯ ಸಾಧಿಸಿದ್ದ ರಮ್ಯಾ ಸೌಜನ್ಯಕ್ಕಾದರೂ ಕೂಡ ಜಿಲ್ಲೆಯ ರೈತರ ಮನೆಗೆ ಭೇಟಿ ನೀಡಿಲ್ಲ. ಅಂತಹ ನಾಯಕಿ ನಮಗೆ ಬೇಡ. ಆದ್ದರಿಂದ ಪಕ್ಷದಿಂದ ಉಚ್ಛಾಟಿಸಿ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರೈತರ ಮನೆಗೆ  ದಿಢೀರ್ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ