ಮಗನ ಸಹಕಾರದೊಂದಿಗೆ ಸೊಸೆ ಮೇಲೆ ಅತ್ಯಾಚಾರ ಯತ್ನ

ಭಾನುವಾರ, 11 ಸೆಪ್ಟಂಬರ್ 2016 (11:50 IST)
ಸೊಸೆಯ ಮೇಲೆ ಮಾವನೇ ಅತ್ಯಾಚಾರಕ್ಕೆ ಯತ್ನಿಸಿ, ಪ್ರತಿಭಟಿಸಿದ್ದಕ್ಕೆ ಸೀಮೆಎಣ್ಣೆ ಹಾಕಿ ಜೀವಂತ ದಹಿಸಲು ಯತ್ನಿಸಿದ ಹೇಯ ಘಟನೆ ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ನಡೆದಿದೆ. ಮತ್ತೂ ಅಸಹ್ಯಕರ ಸಂಗತಿ ಎಂದರೆ ಈ ದುಷೃತ್ಯಕ್ಕೆ ಸ್ವತಃ ಆತನ ಮಗ, ಪೀಡಿತಳ ಗಂಡನೇ ಸಹಕಾರ ನೀಡಿದ್ದಾನೆ.

ಕಾಮುಕ ಮಾವ ರಾಜು, ತಮ್ಮ ಮಗ ರಮೇಶ್ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಆಕೆ ಅದನ್ನು ವಿರೋಧಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮಾವ ರಾಜು ಸೀಮೆಎಣ್ಣೆ ಸುರಿದು ಸೊಸೆಗೆ ಬೆಂಕಿ ಹಚ್ಚಿದ್ದಾನೆ.
 
ಗಂಭೀರ ಸ್ಥಿತಿಯಲ್ಲಿರುವ ಪೀಡಿತೆ ಸ್ಥಳೀಯರ ಸಹಾಯದಿಂದ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
 
ಹಿಂದಿನಿಂದಲೂ ಮಾವ ತನ್ನನ್ನು ವಕ್ರ ದೃಷ್ಟಿಯಿಂದ ನೋಡುತ್ತಿದ್ದ. ಹೀಗಾಗಿ ತವರು ಸೇರಿದ್ದ ನಾನು 15 ದಿನಗಳ ಹಿಂದಷ್ಟೇ ಪತಿಯ ಮನೆಗೆ ಮರಳಿದ್ದೆ. ಆದರೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ ಮಾವನಿಗೆ ಪತಿ ಕೂಡ ಸಹಕಾರ ನೀಡುತ್ತಿದ್ದ. ಇಂದು ನನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ ವಿರೋಧಿಸಿದ್ದಕ್ಕೆ ಸುಟ್ಟು ಕೊಲ್ಲಲು ಯತ್ನಿಸಲಾಗಿದೆ ಎಂದು ಪೀಡಿತೆ ದೂರಿನಲ್ಲಿ ತಿಳಿಸಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ