ಹಿಮ್ಮಾವಿನಲ್ಲಿ ಫಿಲ್ಮ್ ಸಿಟಿ: 110 ಎಕರೆ ಭೂಮಿ ನೀಡಲು ಸರ್ಕಾರದ ಒಪ್ಪಿಗೆ

ಬುಧವಾರ, 7 ಅಕ್ಟೋಬರ್ 2015 (15:38 IST)
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನ ಹಿಮ್ಮಾವಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದ್ದು, 110 ಎಕರೆ ಭೂಮಿ ನೀಡಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಇಂದು ತಿಳಿಸಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಬುರ್ಗಿಯ ಚಿಂಚೋಳಿ ತಾಲೂಕಿನಲ್ಲಿ ಚಿಟ್ಟಿನಾಡ್ ಸಿಮೆಂಟ್ ಕಂಪನಿಗೆ ಸರ್ಕಾರವು 43 ಎಕರೆ ಭೂಮಿ ನೀಡಲು ಒಪ್ಪಿಗೆ ನೀಡಿದ್ದು, ಕಂಪನಿಯೂ ಕೂಡ 49.19 ಎಕರೆ ಬದಲಿ ಭೂಮಿಯನ್ನು ಸರ್ಕಾರಕ್ಕೆ ನೀಡುವಂತೆ ಷರತ್ತು ವಿಧಿಸಲಾಗಿದೆ ಎಂದರು. 
 
ಇದೇ ವೇಳೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಒಪ್ಪಿಗೆ ನೀಡಲಾಗಿದ್ದು, ಇಲ್ಲಿನ ಮೂರು ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು ಎಂದ ಅವರು, ಚಿಕ್ಕಮಗಳೂರು ತಾಲೂಕ್ ಪಂಚಾಯತ್ ಅಧಿಕಾರಿ ಸಿ.ದೇವರಾಜಪ್ಪ ಅವರು 6000 ರೂ. ಹಾಗೂ ಮತ್ತೋರ್ವ ಅರಣ್ಯ ವೀಕ್ಷಕ ನೂರು ರೂ. ಲಂಚ ಸ್ವೀಕರಿಸಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಕೂಡ ಕಡ್ಡಾಯ ನಿವೃತ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

ವೆಬ್ದುನಿಯಾವನ್ನು ಓದಿ