ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್ ದಾಖಲು

ಬುಧವಾರ, 6 ಮೇ 2015 (18:05 IST)
ನಗರೋತ್ಥಾನ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಮುನಿರತ್ನ ಅವರು ಮೊದಲ ಆರೋಪಿಯಾಗಿದ್ದಾರೆ. 10 ಕೋಟಿ ರೂ. ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ನೇತೃತ್ವದ ತಂಡ ತನಿಖೆ ನಡೆಸಲಿದೆ. ಅಗತ್ಯವಾದರೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ
 
ಮುಖ್ಯಮಂತ್ರಿ ನಗರೋತ್ಥಾನ ಯೋಜನೆಗೆ ಕಳೆದ ಆರ್ಥಿಕ ವರ್ಷದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ 1,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಅದರಲ್ಲಿ ರಾಜರಾಜೇಶ್ವರಿ ನಗರಕ್ಕೆ 45 ಕೋಟಿ ರೂಪಾಯಿಯನ್ನು ನೀಡಲಾಗಿತ್ತು. 
 
ಈ  ಯೋಜನೆಯಡಿಯಲ್ಲಿ  65 ಸಿವಿಲ್ ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿತ್ತು ಮತ್ತು ಬಿಬಿಎಂಪಿ ಅದಕ್ಕೆ ಅನುಮೋದನೆ ನೀಡಿತ್ತು. ಈ ಎಲ್ಲ ಕಾಮಗಾರಿಗಳು ಈಗಾಗಲೇ ನಡೆಯುತ್ತಿದೆ ಎಂದು ಲೋಕಾಯುಕ್ತ ಪೊಲೀಸರು  ಕಂಡುಕೊಂಡಿದ್ದಾರೆ. 
 
"ಸಿವಿಲ್ ವರ್ಕ್ ಪಟ್ಟಿಗೆ ಅನುಮತಿ ನೀಡಿದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆ) ಎಂ ವಿಜಯ್ ಕುಮಾರ್, ಮತ್ತು ಶಾಸಕ ಮುನಿರತ್ನ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿಜಯ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಅಗತ್ಯ ಬಿದ್ದರೆ ಮುನಿರತ್ನ ಅವರನ್ನು ಸಹ ಬಂಧಿಸಲಾಗುವುದು ", ಎಂದು ಲೋಕಾಯುಕ್ತ, ಬೆಂಗಳೂರು ಎಸ್ಪಿ ಸೋನಿಯಾ ನಾರಂಗ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ