ಅಕ್ರಮ ಆಸ್ತಿ ಗಳಿಕೆ: ರೇಣುಕಾಚಾರ್ಯ ವಿರುದ್ಧ ಎಫ್ಐಆರ್

ಬುಧವಾರ, 6 ಮೇ 2015 (09:37 IST)
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ವಿರುದ್ಧ  ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
ಹೊನ್ನಾಳಿಯ ಭೃಷ್ಟಾಟಾರ ವಿರೋಧಿ ವೇದಿಕೆ ಅಧ್ಯಕ್ಷರಾದ ಗುರುಪಾದಯ್ಯ ಕಬ್ಬಿಣಕಂತಿ ಮಠದ್ ಅವರು  ರೇಣುಕಾಚಾರ್ಯ ಮತ್ತು ಅವರ ಸಹೋದರಾದ  ಬಸವರಾಜಯ್ಯ, ಆರಾಧ್ಯ ಮತ್ತು ರಮೇಶ್ ಅವರ ವಿರುದ್ಧ ದಾವಣಗೆರೆಯ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ  ದೂರು ಸಲ್ಲಿಸಿದ್ದರು.
 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದಾಖಲಾತಿಗಳು ಅರ್ಜಿದಾರರ ಆರೋಪ ಮೇಲ್ನೋಟಕ್ಕೆ ಪೂರಕವಾಗಿರುವುದರಿಂದ ಪ್ರಕರಣದ ಹೆಚ್ಚಿನ ತನಿಖೆಯನ್ನು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ಮಾಡಬೇಕು, ಜೂನ್ 26 ರಂದು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
 
ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡು  ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. 
 
ಅಕ್ರಮ ಆಸ್ತಿ ಆರೋಪ ಸಾಬೀತಾದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ರೇಣುಕಾಚಾರ್ಯ ಘೋಷಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ