ಪ್ರತ್ಯೇಕ ಕಡೆ ಬೆಂಕಿ ಅವಘಡ: ಸಾಕಷ್ಟು ಆಸ್ತಿ ಬೆಂಕಿಗಾಹುತಿ

ಬುಧವಾರ, 6 ಮೇ 2015 (14:57 IST)
ನಗರದಲ್ಲಿ ಕಳೆದ ರಾತ್ರಿ ಎರಡು ಪ್ರತ್ಯೇಕ ಕಡೆ ಅಗ್ನಿ ಅವಘಡ ಸಂಭವಿಸಿದೆ. ಮೆಜೆಸ್ಟಿಕ್ ಬಳಿಯ ಕೆ.ಜಿ.ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿರುವ ಬಟ್ಟೆ ಹಾಗೂ ಪಕ್ಕದ ಇತರೆ ಮಳಿಗೆಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಾಕಷ್ಟು ಹಾನಿಯುಂಟಾಗಿದೆ. 
 
ಘಟನೆಯಿಂದ ಇಲ್ಲಿನ ಸುತ್ತಮುತ್ತಲಿನ ಮಳಿಗೆಗಳೆಲ್ಲವೂ ಕೂಡ ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ಚಪ್ಪಲಿ, ಬಟ್ಟೆ ಇನ್ನಿತರೆ  ವಸ್ತುಗಳು ನಾಶವಾಗಿವೆ. ಬೆಂಕಿ ಕಾಣಿಸಿಕೊಂಡ ಬಳಿಕವೇ ಸ್ಥಳಕ್ಕಾಗಮಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಸುಮಾರು 2 ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.  
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಕಾಂಪ್ಲೆಕ್ಸ್‌ನ ಹವಾನಿಯಂತ್ರಿತ ಡಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವುದೇ ಘಟನೆಗೆ ಕಾರಣ ಎಂದಿದ್ದಾರೆ. 
 
ಪ್ರಕರಣದ ಹಿನ್ನೆಲೆ: ಉಪ್ಪಾರ ಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಹನುಮಂತರಾಯ ಅವರು ರಾತ್ರಿ ಗಸ್ತಿನಲ್ಲಿದ್ದರು. ಈ ವೇಳೆ ಬೆಂಕಿ ತಗುಲಿರುವುದನ್ನು ಕಂಡ ಅವರು, ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 
 
ತಕ್ಷಣವೇ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ, ನಂದಿಸಲು ಮುಂದಾಗಿದ್ದಾರೆ. ಆದರೆ ಹತೋಟಿಗೆ ಬಾರದ ಕಾರಣ ಮತ್ತಷ್ಟು ಅಗ್ನಿ ಶಾಮಕ ವಾಹನಗಳನ್ನು ತರಿಸಿ ಬೆಂಕಿ ನಂದಿಸಲಾಗಿದೆ. 
 
ಈ ಸಂಬಂಧ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ. 
 
ಮತ್ತೊಂದು ಅನಾಹುತ: 
 
ನಗರದ ನಾಗರಭಾವಿಯ ಕೊಟ್ಟಿಗೆಪಾಳ್ಯ ಸಮೀಪ ಇರುವ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿಯ ಒಳ ಭಾಗದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
 
ಇಲ್ಲಿ ಒಂದು ಗಂಟೆಗೂ ಅಧಿಕವಾಗಿ ನಂದಿಸುವ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಕೊನೆಗೂ ಯಶಸ್ವಿಯಾಗಿವೆ. ಆದರೆ ಅಂಗಡಿಯೊಳಗಿದ್ದ ಬಹುತೇಕ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ.
 
ಅಂಗಡಿಯು ನಗರದ ಗಣೇಶ್‌‌ ಎಂಬುವವರಿಗೆ ಸೇರಿದ್ದಾಗಿದ್ದು, ಮಾಧ್ಯಮಗಲೊಂದಿಗೆ ಪ್ರತಿಕ್ರಿಯಿಸಿದ್ದಾರೆ. ರಾತ್ರಿ 9.30ಕ್ಕೆ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗಿದ್ದೆ. ಊಟ ಮಾಡಿ ಕುಳಿತಿದ್ದಾಗ ಬೆಂಕಿ ಬಿದ್ದಿರುವ ಬಗ್ಗೆ ಫೋನ್ ಬಂತು. ತಕ್ಷಣ ಬಂದು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದೆ. ಅವರು ಬಂದು ಬೆಂಕಿ ನಂದಿಸಿದರು ಎಂದಿದ್ದಾರೆ.
 
ಇನ್ನು ನಗರದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ