ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕಿಡ್ ಮಾಲ್‌ನಲ್ಲಿ ಬೆಂಕಿ ದುರಂತ

ಸೋಮವಾರ, 1 ಫೆಬ್ರವರಿ 2016 (11:55 IST)
ಬೆಂಗಳೂರಿನ ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕಿಡ್ ಮಾಲ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.  ಮೆಕ್ಡೊನಾಲ್ಡ್ ನಲ್ಲಿರುವ ಚಿಮಣಿ ಹೊಗೆಯಿಂದ ಬೆಂಕಿ ಕಾಣಿಸಿಕೊಂಡ ನಂತರ ಇತರೆ ಮಹಡಿಗಳಿಗೂ ಹರಡಿತು ಎಂದು ಹೇಳಲಾಗುತ್ತಿದೆ. ಮೊದಲಿಗೆ  ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ದುರಂತ ಸಂಭವಿಸಿದ್ದಾಗಿ ವರದಿಯಾಗಿತ್ತು.  ಮಾಲ್‌ನ ಬ್ರಾಂಡ್ ಫ್ಯಾಕ್ಟರಿಯಲ್ಲಿ ಬೆಂಕಿ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದ್ದು 4 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.ರಾಜರಾಜೇಶ್ವರಿ ನಗರದ ಗೇಟ್ ಬಳಿ  ಈ ಮಾಲ್ ನೆಲೆಗೊಂಡಿದೆ.  

ಬ್ರಾಂಡ್ ಫ್ಯಾಕ್ಟರಿಯಲ್ಲಿ ಬಟ್ಟೆಗಳ ಷೋರೂಂ ಹೆಚ್ಚಾಗಿದ್ದರಿಂದ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು, ಜನರು ಚೆಲ್ಲಾಪಿಲ್ಲಿಯಾಗಿ ಮಾಲ್‌ನಿಂದ ಹೊರಗೆ ಓಡಿಬಂದರು.  ಬೆಳಿಗ್ಗೆ 10.30ಕ್ಕೆ ಬೆಂಕಿ ಅನಾಹುತ ಸಂಭವಿಸಿದ ಕೂಡಲೇ ಕೆಲವು ಜನರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. 

ಬೆಂಕಿ ಆವರಿಸಿದ್ದರಿಂದ ಕೆಲವು ಅಮೂಲ್ಯ ವಸ್ತುಗಳನ್ನು ಹೊರಗೆ ತಂದಿದ್ದು, ಒಳಕ್ಕೆ ಯಾರನ್ನೂ ಬಿಡುತ್ತಿಲ್ಲವೆನ್ನಲಾಗಿದೆ.  ಬೆಂಕಿ ಅನಾಹುತವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರಿಂದ ರಸ್ತೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. 

ವೆಬ್ದುನಿಯಾವನ್ನು ಓದಿ