ಕರ್ತವ್ಯ ನಿರ್ವಹಿಸಿದ್ದಕ್ಕೆ ಕಡ್ಡಾಯ ರಜೆ

ಬುಧವಾರ, 9 ಡಿಸೆಂಬರ್ 2015 (07:51 IST)
ಅತ್ಯಾಚಾರ, ಕೋಮುಗಲಭೆ ಪ್ರಕರಣದ ಆರೋಪಿಯೊಬ್ಬನನ್ನು ಬ೦ಧಿಸಿದ್ದಕ್ಕಾಗಿ ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರನ್ನು 10 ದಿನ ರಜೆ ನೀಡಿ ಕಳುಹಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶಾಸಕರು ಮತ್ತು ಸಚಿವರ ಒತ್ತಡದ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್‍ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯ 50ಕ್ಕೂ ಹೆಚ್ಚು ಸಿಬ್ಬಂದಿ ಠಾಣೆ ಎದುರು ನಿನ್ನೆ ಪ್ರತಿಭಟನೆ ನಡೆಸಿದರು.

ಇನ್ಸ್ ಪೆಕ್ಟರ್  ವಾಪಸ್ ಬರುವವರೆಗೆ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ಮುಂದುವರೆಸುವುದಾಗಿ ಸಿಬ್ಬಂದಿ ಎಚ್ಚರಿಸಿದರು. ಪೊಲೀಸ್ ಸಿಬ್ಬಂದಿಯ ಈ ಪ್ರತಿಭಟನೆಗೆ ಸ್ಥಳೀಯರು ಸಾಥ್ ನೀಡಿದಾಗ, ಧರಣಿಯ ಕಾವು ತೀವ್ರತೆಗೆ ಹೋಯಿತು. ಸಂಜೆ ಏಳಕ್ಕೆ ಪ್ರತಿಭಟನೆಗೆ ಕುಳಿತ ಸಿಬ್ಬಂದಿಗಳು ಮೇಲಾಧಿಕಾರಿಗಳ ಒತ್ತಾಯಕ್ಕೆ ಮಣಿಯದೆ ತಮ್ಮ ಅಧಿಕಾರಿಗಾದ ಅನ್ಯಾಯವನ್ನು ಖಂಡಿಸಿ ಅವರು ಮರಳುವವರೆಗೆ ಕೆಲಸ ನಡೆಸುವುದಿಲ್ಲವೆಂದು ಪಟ್ಟು ಹಿಡಿದು ಕುಳಿತರು.

ಪ್ರತಿಭಟನಾಕಾರರ ಬೇಡಿಕೆಗೆ ಮಣಿದ ನಗರ ಪೊಲೀಸ್ ಆಯುಕ್ತ ಮುರುಗನ್ ಕೊನೆಗೆ ಇನ್ಸಪೆಕ್ಟರ್‍ ಪ್ರಮೋದ್ ಕುಮಾರ್ ಅವರನ್ನು ಕತ೯ವ್ಯಕ್ಕೆ ಮರಳಿ ಕರೆಯಿಸಿದರು.

2014ರಲ್ಲಿ ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ ನಡೆದ ಗಲಭೆಯ ಆರೋಪಿ ಅಬೂಬಕರ್ ಸಿದ್ಧಿಕ್  ಮೇಲೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಕೊಲೆ ಯತ್ನ ಆರೋಪ ಕೂಡ ದಾಖಲಾಗಿತ್ತು.  ನಾಪತ್ತೆಯಾಗಿದ್ದ ಆತನನ್ನು ಸೋಮವಾರ ಬಂಧಿಸಿದ್ದ ಇನ್ಸ್ ಪೆಕ್ಟರ್  ಪ್ರಮೋದ್ ಕುಮಾರ್ ನಿನ್ನೆ ಕೋರ್ಟ್‍ಗೆ ಹಾಜರು ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಆದರೆ ಮ೦ಗಳವಾರ ಅಪರಾಧ ಪರಿಶೀಲನಾ ಸಭೆಯಲ್ಲಿ ಆಯುಕ್ತ ಮುರುಗನ್, ಪ್ರಮೋದ್ ಕ್ರಮವನ್ನು ಟೀಕಿಸಿ 10 ದಿನಗಳ ಕಾಲ ರಜೆಯಲ್ಲಿ ತೆರಳುವ೦ತೆ ತಿಳಿಸಿದ್ದರು ಎನ್ನಲಾಗಿದೆ.

ಆರೋಪಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಇಬ್ಬರು ರಾಜಕೀಯ ನಾಯಕರು ಮಂಗಳೂರು ಪೊಲೀಸ್ ಆಯುಕ್ತ ಮುರುಗನ್ ಅವರಿಗೆ ಕರೆ ಮಾಡಿ ಇನ್ಸ್‍ಪೆಕ್ಟರ್‍ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದಾರೆಂದು ಹೇಳಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ