ಅರಣ್ಯ ಭೂಮಿ ಒತ್ತುವರಿ ಆರೋಪ: ಸಚಿವರು ಸೇರಿ 50 ಮಂದಿ ವಿರುದ್ಧ ದೂರು

ಗುರುವಾರ, 1 ಅಕ್ಟೋಬರ್ 2015 (17:13 IST)
ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಇತರೆ ಪ್ರಭಾವಿಗಳು ನಗರದ ಜಕ್ಕೂರು ಬಳಿಯ ಮೀಸಲು ಅರಣ್ಯ ಪ್ರದೇಶದಲ್ಲಿನ 177.28 ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಮಾನಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಗಿರೀಶ್ ಗೌಡ ಅವರು ಒಟ್ಟು 50 ಮಂದಿ ವಿರುದ್ಧ ಇಂದು ರಾಜ್ಯ ಲೋಕಾಯುಕ್ತ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ ಅಡಿ ಅವರನ್ನು ಸಂಪರ್ಕಿಸಿದ್ದು, ಸುಮಾರು 50 ಮಂದಿ ವಿರುದ್ಧ ದೂರು ದಾಖಲಿಸಿದ್ದೇನೆ. ಸಚಿವ ದೇಶಪಾಂಡೆ ಅವರ 11 ಎಕರೆ ಸೇರಿದಂತೆ ಇತರೆ 50 ಮಂದಿ ಸೇರಿ ಒಟ್ಟು 177.28 ಎಕರೆ ಕಬಳಿಸಿದ್ದಾರೆ. ಈ ಹಿನ್ನೆಲೆಯ್ಲಲಿ 50 ಮಂದಿ ವಿರುದ್ಧ ದೂರು ದಾಖಲಿಸಿದ್ದೇನೆ. ಅಲ್ಲದೆ ಈ ಸಂಬಂಧ ವಿಸ್ತೃತ ಮಾಹಿತಿ ಪಡೆದ ಲೋಕಾಯುಕ್ತರು ತಮ್ಮಿಂದ ಸಾಕಷ್ಟು ಮಾಹಿತಿ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದರು. 
 
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಸಚಿವ ದೇಶಪಾಂಡೆ ಅವರು 11 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. 

ವೆಬ್ದುನಿಯಾವನ್ನು ಓದಿ