ಪೊಲೀಸರ ವಿರುದ್ಧವೇ ತೊಡೆ ತಟ್ಟಿದ 92 ವರ್ಷದ ಸ್ವಾತಂತ್ರ್ಯ ಹೋರಾಟಗಾರ

ಸೋಮವಾರ, 25 ಜನವರಿ 2016 (11:20 IST)
ಮುಖ್ಯಮಂತ್ರಿ ಭೇಟಿಗಾಗಿ ಬಂದಿದ್ದ ಸ್ವಾತಂತ್ರ್ಯ ಹೋರಾಟಗಾರ  ಹಿರಿಯ ಜೀವ 92 ವರ್ಷದ ವೃದ್ಧ ಉಮಾಪತಿ ಶಾಸ್ತ್ರಿ ಪೊಲೀಸರ ವಿರುದ್ಧವೇ ತೊಡೆತಟ್ಟಿದ ಘಟನೆ ನಡೆದಿದೆ. ಹೈಕೋರ್ಟ್ ಸೂಚನೆಯಂತೆ ಉಮಾಪತಿ ಶಾಸ್ತ್ರಿ ಶನಿವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾಗ ಮನೆಯನ್ನು ನೀಡುವ ಆಶ್ವಾಸನೆಯನ್ನು ಸಿಎಂ ನೀಡಿದ್ದರು. ಇಂದು ಕೂಡ ಆ ಕುರಿತು ಪ್ರಶ್ನಿಸಲು ಸಿಎಂ ಭೇಟಿ ಮಾಡಲು ಆಗಮಿಸಿದ್ದ ಉಮಾಪತಿ ಶಾಸ್ತ್ರಿ ಸಿಎಂ ನಿವಾಸ ಕಾವೇರಿ ಎದುರು ಬಂದು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡುವಂತೆ ಪೊಲೀಸರನ್ನು ಕೋರಿದರು.

 ಪೊಲೀಸರು ಅವಕಾಶ ನೀಡದಿದ್ದಾಗ  ಅವರೊಂದಿಗೆ ಮಾತಿನ ಚಕಮಕಿಗೆ ಇಳಿದರು.  ವಿಧಾನಸೌಧದ ಸಿಎಂ ಕಚೇರಿಯಲ್ಲಿ ಭೇಟಿ ಮಾಡುವಂತೆ ತಿಳಿಸಿದ ಪೊಲೀಸರು ಅವರಿಗೆ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ಆಗ ಪೊಲೀಸರ ಎದುರೇ ತೊಡೆತಟ್ಟಿದ ಸ್ವಾತಂತ್ರ್ಯ ಸೇನಾನಿ ಅವರಿಗೇ ಸವಾಲು ಹಾಕಿದರು.  ಈ ಸಂದರ್ಭದಲ್ಲಿ ಮಾತನಾಡಿದ ಉಮಾಪತಿ ಶಾಸ್ತ್ರಿ ನಾನು ಬ್ರಿಟಿಷರೊಂದಿಗೆ ತಡೆ ತಟ್ಟಿ ಹೋರಾಡಿದವನು. ಇವರಿಗೆಲ್ಲಾ ಹೆದರುತ್ತೀನಾ ಎಂದು ಪ್ರಶ್ನಿಸಿದರು.

ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನಗಳನ್ನು ಮಾಡಿದವರು. ಮುಖ್ಯಮಂತ್ರಿಗಳು ಮತ್ತೆ ಮಾತಾಡುವುದಾಗಿ ಹೇಳಿದ್ದರಿಂದ ನಾನು ಬಂದಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷರಿಗಿರುವ ಸ್ಥಾನಮಾನ ಕೊಟ್ಟರೆ , ಕಾರು, ಬಂಗಲೆ ಕೊಟ್ಟರೆ ಸಾಕು ಎಂದು ತಮ್ಮ ಬೇಡಿಕೆಗಳನ್ನು ಇಟ್ಟರು. ದಿಲ್ಲಿಗೆ ಕರೆದುಕೊಂಡು ಹೋಗಿ ಕರ್ನಾಟಕ ಗಾಂಧಿ ಪ್ರಶಸ್ತಿ ಕೊಡಿಸುವಂತೆ ಕೇಳಿದ್ದೆ.  ಹೇ, ಅದೆಲ್ಲಾ ಆಗೋಲ್ಲ ಎಂದು ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷರು ನಾನು ಅದನ್ನು ಕುರಿತು ಮಾತನಾಡುತ್ತೇನೆ ಎಂದು ಹೇಳಿದ್ದರು. ಆ ವಿಷಯವನ್ನೂ ಮಾತನಾಡಲು ಬಂದಿದ್ದೆ ಎಂದು ಸ್ವಾತಂತ್ರ್ಯ ಸೇನಾನಿ ಹೇಳಿದರು.  

ವೆಬ್ದುನಿಯಾವನ್ನು ಓದಿ