ಬಾರ್ ಎದುರಲ್ಲಿ ಗಾಂಧಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ದೊರೆಸ್ವಾಮಿ ಗರಂ

ಶುಕ್ರವಾರ, 30 ಜನವರಿ 2015 (18:47 IST)
ಬೆಂಗಳೂರು: ನಗರದ ಒರಿಯನ್ ಮಾಲ್‌ನ ಆಡಳಿತ ಮಂಡಳಿ ಬಾರ್‌ವೊಂದರ ಎದುರಲ್ಲಿ ಗಾಂಧಿ ಪ್ರತಿಮೆಯನ್ನು ನಿರ್ಮಿಸಲು ಹೊರಟಿದ್ದು, ಇದು ರಾಷ್ಟ್ರಪಿತ ಗಾಂಧೀಜಿ ಅವರಿಗೆ ತೋರುತ್ತಿರುವ ಅಪಮಾನ. ಹಾಗಾಗಿ ಸ್ಥಳೀಯರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.  
 
ನಗರದ ಒರಿಯನ್ ಮಾಲ್ ಮಾಲೀಕರು ಸಮೀಪದಲ್ಲಿಯೇ ಇರುವ ಬಾರ್‌ವೊಂದರ ಎದುರಲ್ಲಿ ರಾಷ್ಟ್ರಪಿತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರಪಿತ ಗಾಂಧೀಜಿಯನ್ನು ಸರ್ಕಾರ ಮರೆಸಲು ನೋಡುತ್ತಿದೆ. ಮಾಲ್ ಬಳಿ ಬಾರ್ ನಡೆಸುವುದಕ್ಕೆ ಅನುಮತಿ ನೀಡಿದ್ದೇ ತಪ್ಪು. ಅಂತಹದರಲ್ಲಿ ಅದರ ಎದುರು ಗಾಂಧೀ ಪ್ರತಿಮೆ ಸ್ಥಾಪಿಸುವುದೆಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಬಾರ್ ನಡೆಸುವುದಾದರೆ ಪ್ರತಿಮೆ ಪ್ರತಿಷ್ಠಾಪನೆಯನ್ನು ನಿಲ್ಲಿಸಲಿ ಇಲ್ಲವಾದಲ್ಲಿ ಬಾರ್‌ನ ಪರವಾನಿಗೆಯನ್ನು ರದ್ದುಗೊಳಿಸಲಿ ಎಂದು ಸರ್ಕಾರದ ವಿರುದ್ಧ ಗರಂ ಆದರು. ಇದೇ ವೇಳೆ ಈ ಪ್ರಕರಣದ ಬಗ್ಗೆ ಸಾರ್ವಜನಿಕರು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು. 

ನಗರದಲ್ಲಿರುವ ಒರಿಯನ್ ಶಾಪಿಂಗ್ ಮಾಲ್ ಈ ಕೆಲಸಕ್ಕೆ ಕೈ ಹಾಕಿದ್ದು, ಅಲ್ಲಿಯೇ ಇರುವ ಬಾರ್‌ವೊಂದರ ಮುಂಭಾಗದಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಮಾಲ್‌ನ ಆಡಳಿತ ಮಂಡಳಿ, ಕ್ಷಮೆಯಾಚಿಸುವ ಮೂಲಕ ನಿಗಧಿಪಡಿಸಿದ್ದ ಆ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವ ವಿಷಯವನ್ನು ಕೈ ಬಿಟ್ಟಿದೆ. 

ವೆಬ್ದುನಿಯಾವನ್ನು ಓದಿ