ಗ್ಯಾಸ್ ಸ್ಫೋಟ ಕೃತ್ಯಕ್ಕೆ ಮತ್ತೊಂದು ಬಲಿ: ಒಟ್ಟು 5 ಮಂದಿ ಸಾವು

ಮಂಗಳವಾರ, 5 ಮೇ 2015 (11:19 IST)
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಪಿತಗೊಂಡು ಕುಟುಂಬವನ್ನೇ ಸರ್ವನಾಶಗೊಳಿಸಲು ಮುಂದಾಗಿ ನಡೆಸಿದ್ದ ಇಬ್ಬರು ಸಹೋದರರ ಕೃತ್ಯಕ್ಕೆ ಇಂದು ಮತ್ತೊಂದು ಬಲಿಯಾಗಿದ್ದು, ಒಟ್ಟು ಇವರೆಗೆ 5 ಮಂದಿ ಸಾವನ್ನಪ್ಪಿದ್ದಾರೆ.  
 
ಪ್ರಕರಣದ ಹಿನ್ನೆಲೆ: ಒಂದು ಎಕರೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಎಂಬ ಸಹೋದರ ಮನೆಯಲ್ಲಿದ್ದ ಗ್ಯಾಸ್ ನ್ನು ಸ್ಫೋಟಿಸಿ ಕುಟುಂಬ ಸರ್ವನಾಶಕ್ಕೆ ಯತ್ನಿಸಿದ್ದ. ಪರಿಣಾಮ ಮನೆಯಲ್ಲಿದ್ದ ಆರು ಮಂದಿ ಗಂಭೀರವಾಗಿ ಗಾಯಗೊಂಡು, ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಇಲ್ಲಿಯವರೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದರು. ಇಂದು ಕುಟುಂಬದ ಮತ್ತೋರ್ವ ಸದಸ್ಯ, ಬಾಲಕ ಮುಕುಂದ(17) ಸಾವನ್ನಪ್ಪಿದ್ದು, ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ. 
 
ಆಸ್ತಿ ನೀಡವಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಕುಪಿತಗೊಂಡ ಇಬ್ಬರು ಸಹೋದರರು ತನ್ನ ಮತ್ತೋರ್ವ ಸಹೋದರನ ಈಶ್ವರ್ ಅವರ ಕುಟುಂಬದ ಮೇಲೆ ಕೆಂಗಣ್ಣು ಬೀರಿ, ಮನೆಯಲ್ಲಿದ್ದ ಗ್ಯಾಸ್‌ನ್ನು ಸ್ಫೋಟಿಸಿ 6 ಮಂದಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದರು. ಪರಿಣಾಮ ಕುಟುಂಬದ ಯಜಮಾನ ಈಶ್ವರ್, ಪತ್ನಿ ಚಂದ್ರಕಲಾ, ದೀಪಕ್, ಮುಕುಂದ ಸೇರಿ ಮತ್ತೋರ್ವರು ಸಾವನ್ನಪ್ಪಿದ್ದಾರೆ. ಈ ಘಟನೆಯು ಕಳೆದ ಏಪ್ರಿಲ್ 27ರಂದು ರಾಜ್ಯದ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ವರಪಟ್ಟಿ ಗ್ರಾಮದಲ್ಲಿ ನಡೆದಿತ್ತು.  
 
ಇನ್ನು ಮೃತ ಈಶ್ವರ್ ಘಟನೆ ದಿನವೇ ಕಟಕಚಿಂಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ 5 ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.  
 
ಆರು ಮಂದಿ ಇದ್ದ ಕುಟುಂಬದ ಸದಸ್ಯರಲ್ಲಿ ಧರ್ಮೇಂದ್ರ ಉಳಿದಿದ್ದು, ಕೊನೆಯ ಸದಸ್ಯರಾಗಿದ್ದಾರೆ. ಇವರೂ ಕೂಡ ಪ್ರಸ್ತುತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ