ತುಟಿಗೆ ಲಿಪ್‌ಸ್ಟಿಕ್ ಹಚ್ಚಿದ ಬಾಲಕಿಗೆ ಮೈತುಂಬಾ ಗುಳ್ಳೆ, ಗಾಯ

ಬುಧವಾರ, 22 ಅಕ್ಟೋಬರ್ 2014 (16:44 IST)
ಕೊಪ್ಪಳದ ಕಾತರಕಿ ಗ್ರಾಮದ 5ನೇ ತರಗತಿ ಓದುತ್ತಿದ್ದ ಮಂಜುಳಾ ಎಂಬ ಬಾಲಕಿ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡ ಎರಡು ದಿನಗಳಲ್ಲಿ ತುಟಿ ಮೇಲೆ ಗುಳ್ಳೆ ಕಾಣಿಸಿಕೊಂಡು ನಂತರ ಬಾಲಕಿ ದೇಹದ ತುಂಬೆಲ್ಲಾ ಗುಳ್ಳೆಗಳಾಗಿ ಗಾಯಗಳಾಗಿರುವ ಘಟನೆ ಸಂಭವಿಸಿದೆ. ಶಾಲೆಯಿಂದ ಹಿಂತಿರುಗಿದ ಬಾಲಕಿಗೆ ಜ್ವರ ಉಂಟಾಗಿ ಮಲಗಿದ್ದವಳಿಗೆ ತುಟಿಯ ಮೇಲೆ ಗುಳ್ಳೆ ಕಾಣಿಸಿಕೊಂಡು ನಂತರ ದೇಹದ ತುಂಬೆಲ್ಲಾ ಆವರಿಸಿ ಗಾಯಗಳಾದವು.  

ಬಾಲಕಿ ನೋವಿನಿಂದ ನರಳುತ್ತಿದ್ದು, ಬಾಲಕಿಯ ತಂದೆ, ತಾಯಿಗಳು ಮಗಳ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ತುಂಬಾ ಚಟುವಟಿಕೆಯಿಂದ ಓಡಾಡಿಕೊಂಡಿದ್ದ ಮಗುವಿನ ಮುಖ, ಕೈಕಾಲು ಹೊಟ್ಟೆ ಎಲ್ಲೆಂದರಲ್ಲಿ ಗುಳ್ಳೆಗಳು ಉಂಟಾಗಿದ್ದು, ಆ ಗುಳ್ಳೆಗಳು ಒಡೆದು ಗಾಯಗಳಾಗಿವೆ.

ಈ ಗಾಯಗಳ ನೋವಿನಿಂದಾಗಿ ಮಗು ನರಳಾಡುವಂತಾಗಿದೆ.  ಲಿಪ್‌ಸ್ಟಿಕ್‌ನಲ್ಲಿರುವ  ರಾಸಾಯನಿಕದಿಂದ ಅಲರ್ಜಿ ಆಗಿರಬಹುದೆಂದು ವೈದ್ಯರು ಈ ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ