ರೈತರ ಆತ್ಮಹತ್ಯೆ ವರದಿ ಪ್ರಕಟಿಸಿದ ಸರ್ಕಾರ: 6 ತಿಂಗಳಲ್ಲಿ 516 ರೈತರು ಕಣ್ಮರೆ ?!

ಸೋಮವಾರ, 5 ಅಕ್ಟೋಬರ್ 2015 (15:27 IST)
ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿದ್ದ ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಿಕೊಂಡಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ ಸಾಲಬಾಧೆ ತಾಳಲಾರದೆ ಒಟ್ಟು 516 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದೆ. 
 
ಸರ್ಕಾರ ಪ್ರಕಟಿಸಿರುವ ಮಾಹಿತಿ ಪ್ರಕಾರ, ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಒಟ್ಟು 56 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಎರಡನೇ ಸ್ಥಾನದಲ್ಲಿ ಹಾವೇರಿ ಮತ್ತು ಮೈಸೂರು ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ತಲಾ 44 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂತರದ ಸ್ಥಾನದಲ್ಲಿ ತುಮಕೂರು-36, ಹಾಸನ-25, ದಾವಣಗೆರೆ-24, ಚಿಕ್ಕಮಗಳೂರು-23, ರಾಯಚೂರು-21, ದಾವಣಗೆರೆ ಮತ್ತು ಚಿತ್ರದುರ್ಗ-19, ಕಲ್ಬುರ್ಗಿ ಮತ್ತು ಯಾದಗಿರಿ-18, ವಿಜಯಪುರ ಮತ್ತು ರಾಮನಗರ-15, ಬೀದರ್-11, ಶಿವಮೊಗ್ಗ-12, ಬಳ್ಳಾರಿ-11, ಕೊಪ್ಪಳ-10, ಕೋಲಾರ, ಚಾಮರಾಜನಗರ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ನಾಲ್ವರು, ಬೆಂಗಳೂರು ಗ್ರಾಮಾಂತರ-2, ಬೆಂಗಳೂರು ನಗರದಲ್ಲಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.  
 
ಈ ಎಲ್ಲರೂ ಕೂಡ ಕಳೆದ ಏಪ್ರಿಲ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ಅಂತ್ಯದ ವರೆಗೆ ಅಂದರೆ 6 ತಿಂಗಳ ಕಾಲಾವಧಿಯ ಒಳಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಕಾರಿ ಹಾಗೂ ಇತರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು. ಇವರಲ್ಲಿ ಕೆಲ ಮಂದಿ ರೈತರು ಸಾಲಕ್ಕಾಗಿ ಬ್ಯಾಂಕ್‌ಗೆ ತಿರುಗಿ ಕೊನೆಗೆ ಸಾಲ ಸಿಗದ ಕಾರಣದಿಂದಲೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಸರ್ಕಾರ ಮಾಹಿತಿ ನೀಡಿದೆ. 
 
ಇನ್ನು ವರದಿಯಲ್ಲಿ ಈ ಎಲ್ಲಾ ರೈತರೂ ಕೂಡ 25 ಜಿಲ್ಲೆಗಳಿಗೆ ಸಂಬಂಧಿಸಿದವರಾಗಿದ್ದು, ಆತ್ಮಹತ್ಯೆಗೆ ಕಾರಣ, ಅವರು ಬೆಳೆಯುತ್ತಿದ್ದ ಬೆಳೆ, ಸಾಲದ ಮೊತ್ತ ಸೇರಿದಂತೆ ಇನ್ನಿತರೆ ಅಂಶಗಳನ್ನು ಉಲ್ಲೇಖಿಸಿದೆ. ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಸಾಲ ಮನ್ನಾ ಅಥವಾ ಪರಿಹಾರಕ್ಕಾಗಿ ಬೇಡಿಕೆ ಇಡಲಾಗುತ್ತದೆ ಎಂದೂ ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ