29 ಸಚಿವರ ಎರಡು ವರ್ಷದ ಭತ್ಯೆ 14 ಕೋಟಿ ?!

ಬುಧವಾರ, 29 ಜುಲೈ 2015 (13:21 IST)
ಸರ್ಕಾರದ ತೆರಿಗೆ ಹಣದಲ್ಲಿಯೇ ಬದುಕುವ ರಾಜ್ಯ ಕಾಂಗ್ರೆಸ್ ಸರ್ಕಾರದ 29 ಮಂದಿ ಸಚಿವರು ಸರ್ಕಾರದಿಂದ ತಮ್ಮ ಸಾಧನೆಗೂ ಮೀರಿದ ಅಂದರೆ ಸರಿ ಸುಮಾರು 14 ಕೋಟಿ ಭತ್ಯೆ ಪಡೆದಿದ್ದು, ಪ್ರಸ್ತುತ ಸಾರ್ವಜನಿಕರ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. 
 
ಹೌದು, ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಈ ಮಾಹಿತಿ ಪಡೆದು ಮಾಧ್ಯಮಗಳೆದುರು ಬಹಿರಂಗಗೊಳಿಸಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ, ಸರ್ಕಾರದ ಎಲ್ಲಾ ಸಚಿವರೂ ಕೂಡ ಸುಳ್ಳು ದಾಖಲೆಗಳನ್ನು ನೀಡಿ ಕೇವಲ ಎರಡು ವರ್ಷಗಳಲ್ಲಿ ಒಟ್ಟು 13 ಕೋಟಿ 80 ಲಕ್ಷ ಭತ್ಯೆ ಪೆಡದಿದ್ದಾರೆ.  
 
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ವಿನಯ್ ಕುಮಾರ್ ಸೊರಕೆ ಅವರು 56,62,611 ರೂ. ಭತ್ಯೆ ಪಡೆಯುವ ಮೂಲಕ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ತದ ನಂತರದ ಸ್ಥಾನಗಳಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್-54,42,657, ಅರಣ್ಯ ಸಚಿವ ರಮಾನಾಥ ರೈ-51,44,218, ವೈದ್ಯಕೀಯ ಉನ್ನತ ಸಿಕ್ಷಣ ಸಚಿವ ಪರಮೇಶ್ವರ್ ನಾಯಕ್-43,23,689 ಸೇರಿದಂತೆ ಇತರರು ಇದ್ದಾರೆ. 
 
ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು 2,29,286 ರೂ. ಮಾತ್ರ ಭತ್ಯೆ ಪಡೆದು ಅತ್ಯಂತ ಕಡಿಮೆ ಭತ್ಯೆ ಪಡೆದ ಸಚಿವರಾಗಿದ್ದಾರೆ. 
 
ಇನ್ನು ಈ ಬಗ್ಗೆ ಕಾರ್ಯಕರ್ತ ಗಡಾದ್ ಅವರು ಪ್ರತಿಕ್ರಿಯಿಸಿದ್ದು, ಸಚಿವರು ಕೇವಲ ಪ್ರಯಾಣ ಭತ್ಯೆಗಾಗಿ ಒಟ್ಟು 7,53,00,573 ಕೋಟಿ ರೂ. ಪಡೆದಿದ್ದಾರೆ. ಆದರೆ ನಕಲಿ ದಾಖಲೆಗಳನ್ನು ನೀಡಿ ಈ ಭತ್ಯೆ ಪಡೆದಿದ್ದು, ಪ್ರತೀ ಕಿ.ಮೀ 20-30 ರೂ. ತೋರಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 14ರಿಂದ 17ರೂಪಾಯಿ ವರೆಗೆ ಮಾತ್ರ ಪ್ರಯಾಣ ಶುಲ್ಕ ವಿಧಿಸಬಹುದಾಗಿದೆ ಎಂದರು. 
 
ಇದೇ ವೇಳೆ, ಯಾವುದೇ ಸಚಿವರು ತಾವು ಉಸ್ತುವಾರಿ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಆದರೂ ನಕಲಿ ದಾಖಲೆಗಳನ್ನು ನೀಡಿ ದುಬಾರಿ ಪ್ರಮಾಣದ ಭತ್ಯೆ ಪಡೆಯುವಲ್ಲಿ ಸಚಿವರು ನಿಸ್ಸೀಮರಾಗಿದ್ದಾರೆ. ಅವರ ಸಾಧನೆ ಮಾತ್ರ ಶೂನ್ಯ ಎಂದು ಗುಡುಗಿದರು.  

ವೆಬ್ದುನಿಯಾವನ್ನು ಓದಿ