ಕಡ್ಡಾಯ ಮತದಾನದ ತಿದ್ದುಪಡಿ ಮಸೂದೆಗೆ ಸ್ಪಷ್ಟನೆ ಕೇಳಿದ ರಾಜ್ಯಪಾಲರು

ಮಂಗಳವಾರ, 21 ಏಪ್ರಿಲ್ 2015 (11:23 IST)
ರಾಜ್ಯಪಾಲರ ಅನುಮೋದನೆಗೆ ಕಳಿಸಲಾಗಿದ್ದ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲ ವಜುಬಾಯಿ ವಾಲಾ  ಸ್ಪಷ್ಟನೆ ಕೇಳಿ  ತಿರಸ್ಕರಿಸಿದ್ದಾರೆ.  ಕಡ್ಡಾಯ ಮತದಾನ ಕುರಿತ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಉತ್ತರ ನೀಡದಿರುವುದರಿಂದ ಇದನ್ನು ತಿರಸ್ಕರಿಸಿರುವುದಾಗಿ ರಾಜ್ಯಪಾಲ ವಾಜುಬಾಯಿ ವಾಲ ತಿಳಿಸಿದ್ದಾರೆ.

ಕಳೆದ ಅಧಿವೇಶನದಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ಮಸೂದೆ ಕುರಿತು ಸ್ಪಷ್ಟನೆ ಕೇಳಿದ ರಾಜ್ಯಪಾಲರ ಪ್ರಶ್ನೆಗಳಿಗೆ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಉತ್ತರಿಸಿದ್ದರು. ಆದರೆ ಅವರ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲರು ಕಾನೂನಾತ್ಮಕ ಉತ್ತರ ನೀಡಿ ಎಂದು ಹೇಳಿ ಮಸೂದೆಯನ್ನು ತಿರಸ್ಕರಿಸಿದ್ದಾರೆ.

ಮತದಾನವನ್ನು ಶೇ. 75ರಷ್ಟು ಜನರು ಮಾಡಿದರೆ ಕಡ್ಡಾಯ ಮತದಾನ ಮಾಡದೇ ಉಳಿದ ಲಕ್ಷಾಂತರ  ಜನರ ಮೇಲೆ ನೀವು ಕ್ರಮ ಕೈಗೊಳ್ಳಲು ಆಗುತ್ತದೆಯೇ ಎಂದು ರಾಜ್ಯಪಾಲರು ಪ್ರಶ್ನೆ ಕೇಳಿದ್ದರು. ಅಲ್ಲದೇ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದೂ ರಾಜ್ಯಪಾಲರು ಸೂಚಿಸಿದ್ದರು.  ಎಜಿ ರವಿವರ್ಮಕುಮಾರ್ ಮೂಲಕ ಕಾನೂನಾತ್ಮಕ ಸ್ಪಷ್ಟನೆ ನೀಡಿ ಎಂದೂ ರಾಜ್ಯಪಾಲರು ಸೂಚಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ