ಕಲಾಂ ವಿಧಿವಶ ಹಿನ್ನೆಲೆ ಏಳು ದಿನ ರಾಷ್ಟ್ರೀಯ ಶೋಕಾಚರಣೆ

ಮಂಗಳವಾರ, 28 ಜುಲೈ 2015 (12:45 IST)
ಪಾಠ ಮಾಡುತ್ತಲೇ ಕೊನೆಯುಸಿರೆಳೆದಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ, ಖ್ಯಾತ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಸುನೀಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ನಡೆಸಲು ಕೇಂದ್ರ ಸರ್ಕಾರ ಘೋಷಿಸಿದೆ. 
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪುಟ ಸಭೆ ನಡೆಸಿದ್ದು, ಸಭೆಯಲ್ಲಿ ಈ ತೀರ್ಮಾನ ಕೈಗೊಂಡು ಅಧಿಕೃತವಾಗಿ ಪ್ರಕಟಿಸಲಾಗಿದೆ.
 
ಸರ್ಕಾರಿ ಆದೇಶದ ಪ್ರಕಾರ, ಏಳು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ನಡೆಸಲು ಉದ್ದೇಶಿಸಿದ್ದು, ಇಂದಿನಿಂದ ಪ್ರಾರಂಭವಾಗಲಿದೆ. ಈ ಏಳು ದಿನಗಳ ಅವಧಿಯಲ್ಲಿ ಯಾವುದೇ ರೀತಿಯಾದ ಸರ್ಕಾರಿ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭಗಳು ಹಾಗೂ ಸಂಭ್ರಮಾಚರಣೆಗಳು ನಡೆಯುವುದಿಲ್ಲ. 
 
ವಿಶೇಷವಿಂದರೆ ಕಲಾಂ ಅವರು ಜೀವದಲ್ಲಿದ್ದ ಸಂದರ್ಭದಲ್ಲಿ ನಾನು ಅಸುನೀಗಿದಲ್ಲಿ ನನ್ನ ನೆನಪಿಗಾಗಿ ಒಂದು ದಿನ ಹೆಚ್ಚಾಗಿ ಕೆಲಸ ನಿರ್ವಹಿಸಿ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಿವಶರಾಗಿದ್ದರೂ ಕೂಡ ಅವರ ಆಶಯದಂತೆಯೇ ಸರ್ಕಾರ ಕ್ರಮ ಕೈಗೊಂಡಿದ್ದು, ಶಾಲಾ ಕಾಲೇಜುಗಳು ಇಂದು ಯಥಾ ಸ್ಥಿತಿಯಲ್ಲಿ ನಡೆಯಲಿವೆ. 
 
2002ರಿಂದ 2007ರ ವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಕಲಾಂ ಉತ್ತಮ ಸೇವೆ ಸಲ್ಲಿಸಿ ಜನ ನಾಯಕರಾಗಿ ಸಾರ್ವಜನಿಕರ ಮನದಲ್ಲಿ ಮನೆ ಮಾಡಿದ್ದರು. ಅಲ್ಲದೆ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಸಲ್ಲಿಸಿದ್ದ ಅವರು, ಕ್ಷಿಪಣಿಯ ಜನಕ ಎಂಬ ಖ್ಯಾತಿ ಪಡೆದಿದ್ದರು. ಜೀವನದುದ್ದಕ್ಕೂ ಕೂಡ ಅವಿವಾಹಿತರಾಗಿಯೇ ಜೀವನ ಪೂರೈಸಿದ ಕಲಾಂ, ನಿನ್ನೆ ಮೆಘಾಲಯದ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. 
 
ಪ್ರಸ್ತುತ ಕಲಾಂ ಅವರ ಪಾರ್ಥಿವ ಶರೀರವನ್ನು ದೆಹಲಿಯ ಪಾಲಂ ಏರ್ಪೋರ್ಟ್‌ಗೆ ತರಲಾಗಿದ್ದು, ಕೇಂದ್ರ ಸರ್ಕಾರದ ಜನಪ್ರತಿನಿಧಿಗಳು ಹಾಗೂ ನಾಯಕರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅದಾದ ಬಳಿಕ ಮಧ್ಯಾಹ್ನ ಮೂರು ಗಂಟೆಗೆ ಕಲಾಂ ಅವರ ದೆಹಲಿಯ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ನಾಳೆ ಬೆಳಗ್ಗೆ 6 ಗಂಟೆಗೆ ತಮಿಳು ನಾಡಿನ ಅವರ ಹುಟ್ಟೂರು ರಾಮೇಶ್ವರಕ್ಕೆ ತಂದು ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ