ನನ್ನಿಂದ ಸರ್ಕಾರಕ್ಕೆ ಒಂದು ನಯಾಪೈಸೆ ನಷ್ಟವಾಗಿಲ್ಲ: ಶೆಟ್ಟರ್ ಸ್ಪಷ್ಟನೆ

ಸೋಮವಾರ, 15 ಸೆಪ್ಟಂಬರ್ 2014 (15:23 IST)
ಶೆಟ್ಟರ್ ಸಿಎಂ ಆಗಿದ್ದಾಗ ಕಾನೂನು ಉಲ್ಲಂಘಿಸಿ ಮುರುಘಾಮಠಕ್ಕೆ 29.19 ಕೋಟಿ ಡಿಡಿಯನ್ನು ಸರ್ಕಾರ ಪಾವತಿಸಿದ ಸಂಗತಿ ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತ  ಟಿ.ಜೆ. ಅಬ್ರಹಾಂ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.  ಕಾನೂನು ಇಲಾಖೆ ಖರೀದಿ ಸೂಕ್ತವಲ್ಲ ಎಂದು ವರದಿ ಮಾಡಿದ್ದರೂ ಸರ್ಕಾರ ಮುರುಘಾಮಠದ ಭೂಮಿ ಖರೀದಿಗೆ ಅನುಮತಿ ನೀಡಿದೆ.  ಇದರಿಂದ ಸರ್ಕಾರಕ್ಕೆ 63 ಕೋಟಿ ರೂ ನಷ್ಟವಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಮಠದ ಸಾಲ ತೀರಿಸಿ ಸರ್ಕಾರ ಸ್ವಾಮೀಜಿಗೆ ಹಣವನ್ನು ನೀಡಿದೆ.

34.36 ಕೋಟಿ ಸಾಲವನ್ನು ಮುರುಘಾಮಠ ಯೂನಿಯನ್ ಬ್ಯಾಂಕ್‌ನಿಂದ ಪಡೆದಿತ್ತು. ಮುರುಘಾಮಠ ಪಡೆದಿದ್ದ ಸಾಲ ತೀರಿಸಲು ಸರ್ಕಾರ 34 ಕೋಟಿ ರಿಲೀಸ್ ಮಾಡಿತು ಎಂದು ಅಬ್ರಾಹಂ ಆರೋಪಿಸಿದ್ದಾರೆ. ಈ ಕುರಿತು ಸ್ವತಃ ಜಗದೀಶ್ ಶೆಟ್ಟರ್ ಅವರ ಪ್ರತಿಕ್ರಿಯೆಯನ್ನು ಕೇಳಿದಾಗ.  ಅರ್ಕಾವತಿ ಡಿನೋಟಿಫಿಕೇಶನ್ ವಿಷಯ ಎತ್ತಿದ ಬಳಿಕ ಬ್ಲಾಕ್‌ಮೇಲ್ ಮಾಡುವುದಕ್ಕೆ ಒಂದೊಂದೇ ವಿಷಯವನ್ನು ಸಿಎಂ ಎತ್ತುತ್ತಿದ್ದಾರೆ.

ಮುರುಘಾಮಠದ ಭೂಮಿಯನ್ನು ಕಾನೂನುಬದ್ಧವಾಗಿ ಖರೀದಿ ಮಾಡಲಾಗಿದೆ. ಕೆಐಎಡಿಬಿ ತಮಗೆ ಭೂಮಿ ಬೇಕೆಂದು ಹೇಳಿದ್ದರಿಂದ ಕೆಐಎಡಿಬಿಗೆ ಖರೀದಿ ಮಾಡಲಾಗಿದೆ. ಇದರಲ್ಲಿ ಕಾನೂನುಬಾಹಿರ ಯಾವುದೂ ಇಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ನಿರ್ಧರಿಸಿ ಆಸ್ತಿ ಖರೀದಿಸಲಾಗಿದೆ ಎಂದು ಹೇಳಿದರು. ಅಬ್ರಹಾಂ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನಿಂದ ಸರ್ಕಾರಕ್ಕೆ ಒಂದು ನಯಾಪೈಸೆ ನಷ್ಟವಾಗಿಲ್ಲ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು. 

ವೆಬ್ದುನಿಯಾವನ್ನು ಓದಿ