ರಾಜ್ಯದ ಜನತಗೆ ವಿದ್ಯುತ್ ಶಾಕ್ ನೀಡಿದ ರಾಜ್ಯ ಸರ್ಕಾರ

ಸೋಮವಾರ, 2 ಮಾರ್ಚ್ 2015 (17:24 IST)
ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸಲ್ ದರವನ್ನು ಏರಿಸಿ ಸಾರ್ವಜನಿಕರಿಗೆ ಶಾಕ್ ನೀಡಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಕೂಡ ಜನತೆಗೆ ಇಂದು ವಿದ್ಯುತ್ ಶಾಕ್ ನೀಡಿದೆ. 
 
ಹೌದು, ಇಂದು ಪತ್ರಿಕಾಗೋಷ್ಠಿಯನ್ನು ಕರೆದಿದ್ದ ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣಾ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸ್ ಮೂರ್ತಿ ಅವರು, ಇನ್ನುಮುಂದೆ ಪ್ರತಿ ಯೂನಿಟ್ ವಿದ್ಯುಚ್ಛಕ್ತಿಗೆ 13-20 ಪೈಸೆ ದರವನ್ನು ಏರಿಕೆ ಮಾಡುತ್ತಿದ್ದು, ಇದು ಪ್ರಸಕ್ತ ಸಾಲಿಗೆ ಅನ್ವಯವಾಗಲಿದೆ. ಅಲ್ಲದೆ ಈ ನೂತನ ಪರಿಷ್ಕೃತ ದರವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು. 
 
ಇನ್ನು ಇದೇ ವೇಳೆ ಮಾತನಾಡಿದ ಅವರು, ಈ ದರವೇ ಅಂತಿಮವಾಗಿದ್ದು, ರಾಜ್ಯದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಹಾಗೂ ಚೆಸ್ಕಾಂ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದ ಅವರು, ವಿದ್ಯತ್ ಉತ್ಪಾದನಾ ಕಂಪನಿಗಳು ದರವನ್ನು ಏರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಕಳೆದ ಡಿಸೆಂಬರ್‌ನಲ್ಲಿಯೇ 80 ಪೈಸೆ ಏರಿಕೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಪ್ರಸ್ತುತ ಏರಿಕೆಗೆ ನಿರ್ಧರಿಸಲಾಗಿದ್ದು, ಕೇವಲ 13-20 ಪೈಸೆ ವರೆಗೆ ಏರಿಕೆ ಮಾಡಲಾಗಿದೆ. ಇದು ವಿವಿಧ ವರ್ಗದ ಜನರಿಗೆ ಅವರು ಬಳಸುವ ವಿದ್ಯುತ್ ಪ್ರಮಾಣದ ಆಧಾರದ ಮೇಲೆ ವಿಧಿಸಲಾಗುತ್ತದೆ ಎಂದರು.  
 
ಬಳಿಕ ಮಾತನಾಡಿದ ಅವರು, ಗೃಹ ಬಳಕೆಗೆಂದು ಬಳಸುವ ವಿದ್ಯತ್‌ನಲ್ಲಿ 100 ಯೂನಿಟ್ ಒಳಗೆ ಬಳಕೆಯಾಗಿದ್ದಲ್ಲಿ ಅಂತಹವರು ಈ ದರದಿಂದ ವಿನಾಯಿತಿ ಪಡೆಯಲಿದ್ದಾರೆ. ಆದರೆ 100 ಯೂನಿಟ್ ಬಳಕೆ ದಾಟಿದಲ್ಲಿ ಪ್ರತಿ ಯೂನಿಟ್‌ಗೆ 15 ಪೈಸೆಯಂತೆ ದರ ಪಾವತಿಸಬೇಕಾಗುತ್ತದೆ ಎಂದರು. 

ವೆಬ್ದುನಿಯಾವನ್ನು ಓದಿ