ಕಬ್ಬು ಬೆಳಗಾರರಿಗೆ ಖಜಾನೆಯಿಂದಲೇ ಹಣ ಪಾವತಿಸಲಿ: ಸರ್ಕಾರಕ್ಕೆ ಈಶ್ವರಪ್ಪ ಆಗ್ರಹ

ಸೋಮವಾರ, 29 ಜೂನ್ 2015 (12:16 IST)
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಸಂಬಂಧ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಪ್ರತಿಕ್ರಿಯಿಸಿದ್ದು, ಸರ್ಕಾರ ತನ್ನ ಖಜಾನೆಯಿಂದ ಕೂಡಲೇ ಹಣ ಬಿಡುಗಡೆ ಮಾಡಿ ಮತ್ತೆ ಸಕ್ಕರೆ ದಾಸ್ತಾನನ್ನು ಮಾರುವ ಮೂಲಕ ತನ್ನ ಖಜಾನೆ ತುಂಬಿಸಿಕೊಳ್ಳಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 
 
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಕಳೆದ ಎರಡು ವರ್ಷಗಳಿಂದಲೂ ಕೂಡ ಹಣ ಬಿಡುಗಡೆ ಮಾಡುವುದಾಗಿ ಹೇಳಿಕೊಂಡೇ ಬರುತ್ತಿದೆ. ಆದರೆ ಇಲ್ಲಿಯವರೆಗೂ ಕೂಡ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತಿರುವ ರಾಜ್ಯದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಖಜಾನೆಯಲ್ಲಿರುವ ಹಣವನ್ನೇ ರೈತರಿಗೆ ಬಿಡುಗಡೆ ಮಾಡಿ ಬಳಿಕ ವಶಕ್ಕೆ ಪಡೆದಿರುವ ಸಕ್ಕರೆ ಮಾರಿ ಖಜಾನೆ ತುಂಬಿಸಿಕೊಳ್ಳಲಿ ಎಂದ ಅವರು, ಸರ್ಕಾರದ ಬಳಿ ಕೇವಲ 2 ಸಾವಿರ ಕೋಟಿ ಇಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. 
 
ಇನ್ನು ಕಬ್ಬು ಬೆಳೆಗಾರರ ಬಾಕಿ ಙಣ ಪಾವತಿಸಲು ಸರ್ಕಾರ ರಾಜ್ಯದಲ್ಲಿನ ಹಲವು ಸಕ್ಕರೆ ಕಾರ್ಖಾನೆಗಳನ್ನು ವಶಕ್ಕೆ ಪಡೆದಿದ್ದು, ಸಕ್ಕರೆ ಹಾಗೂ ಕಾಂಕಂಬಿಯನ್ನು ಜಪ್ತಿ ಮಾಡಿಕೊಂಡಿದೆ. ಅಲ್ಲದೆ ಅದನ್ನು ಮಾರಿ ರೈತರಿಗೆ ನೀಡಬೇಕಿರುವ ಬಾಕಿ ಹಣ ಪಾವತಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ