ಲಾಟರಿ ಹಗರಣವನ್ನು ಸಿಬಿಐಗೆ ವಹಿಸಲಿ: ಸರ್ಕಾರಕ್ಕೆ ಗೌಡರ ಒತ್ತಾಯ

ಸೋಮವಾರ, 25 ಮೇ 2015 (13:07 IST)
ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಪ್ರತಿಕ್ರಿಯಿಸಿದ್ದು, ಪ್ರಕರಣದಲ್ಲಿ ಸಿಎಂ, ಗೃಹ ಸಚಿವರೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. 
 
ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ತೆಲಗಿ ಪ್ರಕರಣವನ್ನು ಸಿಬಿಐಗೆ ವಹಿಸಲಿಲ್ಲ. ಆದೆ ಈ ಪ್ರಕರಣವು ಅದನ್ನೂ ಮೀರಿಸುವಂತಿದ್ದು, ಬಹುಕೋಟಿ ಹಗರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರ ವಿಳಂಬ ಮಾಡದೆ ಸಿಬಿಐ ವಹಿಸಲಿ ಎಂದು ಒತ್ತಾಯಿಸಿದರು. 
 
ಇದೇ ವೇಳೆ, ಪ್ರಕರಣವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ಗುಪ್ತಚರ ಇಲಾಖೆಯ ಕರ್ತವ್ಯ. ಒಂದು ವೇಳೆ ಮಾಹಿತಿ ನೀಡಿಲ್ಲ ಎಂದಾದಲ್ಲಿ ಗೃಹ ಇಳಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಅವರ ಸಲಹೆಗಾರ ಕೆಂಪಯ್ಯ ಸೇರಿದಂತೆ ಇತರರು ಭಾಗಿಯಾಗಿರಬಹು. ಈ ಹಿನ್ನೆಲೆಯಲ್ಲಿ ಸಿಬಿಐನಿಂದ ಸೂಕ್ತ ತನಿಖೆಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.   
 
ಇದೇ ವೇಳೆ, ಪ್ರಸ್ತುತ ಐಪಿಎಸ್‌ ಅಧಿಕಾರಿಗಳ ಅಮಾನತು ಹಾಗೂ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಪ್ರಕರಣ ಇಲ್ಲಿಗೇ ಅಂತ್ಯ ಕಾಣುವುದಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೊಳಪಟ್ಟಲ್ಲಿ ರಾಜ್ಯದ ರಾಜಕೀಯದಲ್ಲಿರುವ ಘಟಾನುಘಟಿ ನಾಯಕರೇ ಸಿಕ್ಕಿಬೀಳಲಿದ್ದಾರೆ. ಅಲ್ಲದೆ ಈ ಹಗರಣವು ನಾನು ಮುಖ್ಯಮಂತ್ರಿಯಾಗಿದ್ದಾಗಿನಿಂದಲೇ ಚಾಲ್ತಿಯಲ್ಲಿದೆ ಎಂದರು. 
 
ಪ್ರಕರಣ ಸಂಬಂಧ ಈಗಾಗಲೇ ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ಧರಣೇಶ್ ಅವರನ್ನು ಸರ್ಕಾರ ಅಮಾನತು ಮಾಡಿದೆ. ಅಲ್ಲದೆ ಪ್ರಸ್ತುತ ತನಿಖೆಯನ್ನು ಚುರುಕುಗೊಳಿಸಿದ್ದು, ಇಂದೂ 6 ಮಂದಿ ಪೊಲೀಸ್ ಅಧಿಕಾರಿಗಳನ್ನು ತನಿಖೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ