ಸರ್ಕಾರ ಬಿಡಿಎ ಅಕ್ರಮ ಬಡಾವಣೆಗಳನ್ನು ತೆರವು ಮಾಡಲಿದೆಯೇ: ಸುಭಾಷ್ ಡಿ ಆಡಿ

ಬುಧವಾರ, 6 ಮೇ 2015 (18:00 IST)
ಸರ್ಕಾರ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಡಿ ಆಡಿ ಅವರ ನೇತೃತ್ವದಲ್ಲಿ ಸಬೆ ನಡೆದಿದ್ದು, ಸರ್ಕಾರವೇ ಅಕ್ರಮವಾಗಿ ನಿರ್ಮಿಸಿರುವ ಬಡಾವಣೆಗಳನ್ನೂ ಕೂಡ ಸರ್ಕಾರ ತೆರವುಗೊಳಿಸಲಿದೆಯೇ ಎಂದು ಪ್ರಶ್ನಿಸಿದ್ದಾರೆ.  
 
ನಗರದ ಎಂ.ಎಸ್.ಬಿಲ್ಡಿಂಗ್‌ನಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಲೋಕಾಯುಕ್ತ ಆಡಿ ಮಾತನಾಡಿ, ಸರ್ಕಾರವು ಪ್ರಸ್ತುತ ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ ಮಾಡಲಾಗಿದೆ ಎಂಬ ಕಾರಣದಿಂದ ಖಾಸಗಿ ಬಡಾವಣೆಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅಕ್ರಮವಾಗಿ ಒತ್ತುವರಿ ಮಾಡಿ ನಿರ್ಮಿಸಿರುವ ಬಡಾವಣೆಗಳನ್ನೂ ಕೂಡ ಸರ್ಕಾರ ತೆರವುಗೊಳಿಸಲಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತ ಬಸವರಾಜು, ಸರ್ಕಾರವು ಈ ಹಿಂದೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಮಾತ್ರವೇ ಕೆರೆ ಒತ್ತುವರಿ ಮಾಡಿಕೊಂಡಿದೆ. ಇದಕ್ಕೆ ಉದಾಹರಣೆ ಎಂಬಂತೆ ನಗರದ ಧರ್ಮಾಂಬುಧಿ ಕೆರೆಯಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಎಂದರು. 
 
ಬಳಿಕ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಲಿದ್ದು, ಅಲ್ಲಿಯವರೆಗೆ ತೆರವು ಕಾರ್ಯಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಅಂತ್ಯಗೊಳಿಸಲಾಯಿತು.
 
ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ಹಾಗೂ ಬಿಡಿಎ ಆಯುಕ್ತ ಟಿ. ಶ್ಯಾಮ್ ಭಟ್ ಅವರು ಸೇರಿದಂತೆ ಕಂದಾಯ ಇಲಾಖೆ ಮತ್ತು ಬಿಡಿಎಯ ಉನ್ನತ ಅಧಿಕಾರಿಗಳ ತಂಡ ಸಭೆಯಲ್ಲಿ ಭಾಗವಹಿಸಿತ್ತು. 
 
ಈ ಸಂಬಂಧ ನಿನ್ನೆ ಸಭೆ ನಡೆಸಿದ್ದ ಉಪ ಲೋಕಾಯುಕ್ತರು, ಸರ್ಕಾರವೇ ಅಕ್ರಮವಾಗಿ 11 ಬಡಾವಣೆಗಳನ್ನು ನಿರ್ಮಿಸಿದ್ದು, ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದಿದ್ದರು.  

ವೆಬ್ದುನಿಯಾವನ್ನು ಓದಿ