ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ: ರಾಜ್ಯಾಪಾಲ ರಾಜೀನಾಮೆ ಸಾಧ್ಯತೆ

ಸೋಮವಾರ, 19 ಮೇ 2014 (15:15 IST)
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅವಧಿಗೆ ಮುನ್ನವೇ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
 
2009, ಜೂನ್ 24ರಂದು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದ ಹಂಸರಾಜ್ ಭಾರದ್ವಾಜ್ ಅವರ ಅಧಿಕಾರ ಅವಧಿ ಜೂನ್ 29ರವರೆಗೆ ಇದೆ. ಆದರೆ ಅವಧಿಗೆ ಮುನ್ನವೇ ಅವರು ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
 
ಈ ಸಂಬಂಧ ಇತ್ತೀಚಿಗಷ್ಟೇ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ್ದ ಭಾರದ್ವಾಜ್ ಅವರು ತಾವು ರಾಜಭವನ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಚುನಾವಣೆ ಫಲಿತಾಂಶದ ಬಳಿಕ ತನ್ನ ನಿರ್ಧಾರ ಪ್ರಕಟಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್ ತಿಳಿಸಿತ್ತು.
 
ಹಂಸರಾಜ್ ಭಾರದ್ವಾಜ್ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ಜತೆಗೆ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿ, ಚಾಟಿ ಬೀಸುವ ಕೆಲಸ ಮಾಡುತ್ತಿದ್ದರು. ವಿಶೇಷ ಎಂದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಮೇಲೂ ಅವರು ಆಗಾಗ್ಗೆ ಸರ್ಕಾರಕ್ಕೆ ಚಾಟಿ ಏಟು ನೀಡುತ್ತಲೇ ಇದ್ದಾರೆ.
 
ಕಾಂಗ್ರೆಸ್ ಸರ್ಕಾರದ ಪಾಲಿಗೂ ಭಾರವಾಗಿದ್ದ ಭಾರದ್ವಾಜ್ ಅವರು ರಾಜೀನಾಮೆ ನೀಡುತ್ತಿರುವುದು ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳಿಗೆ ಸಂತಸದ ವಿಚಾರ. ಆದರೆ, ಮುಂದೆ ನೇಮಕವಾಗುವ ರಾಜ್ಯಪಾಲರು ಮಗ್ಗುಲ ಮುಳ್ಳಾಗುವುದಿಲ್ಲ ಎಂದು ಹೇಳಲಾಗದು.
 

ವೆಬ್ದುನಿಯಾವನ್ನು ಓದಿ