ಉಪ ಲೋಕಾಯುಕ್ತರ ನೇಮಕದ 2ನೇ ಶಿಫಾರಸ್ಸನ್ನೂ ತಿರಸ್ಕರಿಸಿದ ರಾಜ್ಯಪಾಲರು: ಸರ್ಕಾರಕ್ಕೆ ಮುಖಭಂಗ

ಸೋಮವಾರ, 28 ಸೆಪ್ಟಂಬರ್ 2015 (14:45 IST)
ಲೋಕಾಯುಕ್ತ ಇಲಾಖೆಯಲ್ಲಿ ಖಾಲಿ ಇರುವ ಉಪ ಲೋಕಾಯುಕ್ತರ ಸ್ಥಾನಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನು ನೇಮಿಸುವಂತೆ ಸರ್ಕಾರವು ರಾಜ್ಯಪಾಲರಿಗೆ ಎರಡನೇ ಬಾರಿಗೆ ಶಿಫಾರಸು ಮಾಡಿದ್ದು, ಶಿಫಾರಸನ್ನು ರಾಜ್ಯಪಾಲರು ಇಂದು ತಿರಸ್ಕರಿಸಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. 
 
ಹೌದು, ಇಲಾಖೆಯಲ್ಲಿ ಖಾಲಿ ಇದ್ದ ಉಪ ಲೋಕಾಯುಕ್ತ ಸ್ಥಾನಕ್ಕೆ ಸರ್ಕಾರವು ಮಂಜುನಾಥ್ ಅವರನ್ನು ನೇಮಿಸುವಂತೆ ಈ ಮೊದಲೇ ಶಿಫಾರಸು ಮಾಡಿತ್ತು. ಆದರೆ ಮೊದಲ ಶಿಫಾರಸಿನಲ್ಲಿ ನ್ಯಾ.ಕೆ.ಎಲ್.ಮಂಜುನಾಥ್ ಅವರ ಬದ್ಧತೆ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಅಲ್ಲದೆ ನೇಮಕ ಸಂಬಂಧ ಆಯ್ಕೆ ಸಮಿತಿಯ ಗಮನಕ್ಕೂ ತಾರದೆ ಒಪ್ಪಿಗೆ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಟಿಪ್ಪಣಿಯನ್ನು ಪರಿಶೀಲಿಸುವಂತೆ ಸೂಚಿಸಿ ಶಿಫಾರಸು ಕಡತವನ್ನು ರಾಜ್ಯಪಾಲರು ಹಿಂದಿರುಗಿಸಿದ್ದರು. ಆದರೆ ಅದೇ ಕಡತವನ್ನು ಸರ್ಕಾರವು ಮತ್ತೆ ಎರಡನೇ ಬಾರಿಗೆ ಕಳುಹಿಸಿಕೊಟ್ಟಿತ್ತು. ಆದರೆ ಈ ರಾಜ್ಯಪಾಲರು ಈ ಬಾರಿಯೂ ಕೂಡ ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. 
 
ಇನ್ನು ಈ ಹುದ್ದೆಯಲ್ಲಿದ್ದ ನಿವೃತ್ತ ನ್ಯಾ.ಎಸ್.ಬಿ.ಮಜ್ಜಗೆ ಅವರು ಕಳೆದ ಎರಡು ತಿಂಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರ ಸ್ಥಾನ ತೆರವಾಗಿದ್ದು, ಆ ಸ್ಥಾನಕ್ಕೆ ನ್ಯಾ.ಕೆ.ಎಲ್.ಮಂಜುನಾಥ್ ಅವರನ್ನು ನೇಮಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. 

ವೆಬ್ದುನಿಯಾವನ್ನು ಓದಿ